ನನ್ನ-ಮೋದಿ ಸಂಬಂಧ ರಾಜ್ಯ ಸಭಾ ಸ್ಥಾನಕ್ಕೆ ಸೀಮಿತವಲ್ಲ : ದೇವೇಗೌಡ
ಬೆಂಗಳೂರು, 10 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಎನ್ಡಿಎ ವತಿಯಿಂದ ಟಿಕೆಟ್ ಸಿಗದಿರುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಸಾರ್ವಜನಿಕ ಜೀವನದಲ್ಲಿ ತಮ್ಮ ಚಟುವ
Deve Gowda


ಬೆಂಗಳೂರು, 10 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕದಿಂದ ರಾಜ್ಯಸಭಾ ಚುನಾವಣೆಗೆ ಎನ್ಡಿಎ ವತಿಯಿಂದ ಟಿಕೆಟ್ ಸಿಗದಿರುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಸಾರ್ವಜನಿಕ ಜೀವನದಲ್ಲಿ ತಮ್ಮ ಚಟುವಟಿಕೆಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಸುಮ್ಮನೆ ಕೂರಲ್ಲ. ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಜ್ಯ ಮತ್ತು ದೇಶದ ವಿಚಾರಗಳಲ್ಲಿ ಯಾರ ಹಂಗಿಲ್ಲದೆ ಮಾತನಾಡುತ್ತೇನೆ. ರಾಜ್ಯ ಸಭಾ ಸದಸ್ಯ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನನ್ನ ರಾಜಕೀಯ ಮತ್ತು ಸಾರ್ವಜನಿಕ ಜೀವನ ಅಂತ್ಯವಾಗುವುದಿಲ್ಲ” ಎಂದು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ದೇವೇಗೌಡರು, “ನನ್ನ ಮತ್ತು ಮೋದಿ ಅವರ ನಡುವಿನ ಸಂಬಂಧ ಒಂದು ರಾಜ್ಯಸಭಾ ಸ್ಥಾನಕ್ಕೆ ಸೀಮಿತವಾಗಿಲ್ಲ. ಕಳೆದ ಹತ್ತು ವರ್ಷಗಳಿಂದ ನಮ್ಮ ನಡುವೆ ವೈಯಕ್ತಿಕ ಸ್ನೇಹ ಮತ್ತು ಪರಸ್ಪರ ಗೌರವದ ಸಂಬಂಧವಿದೆ. ಅವರ ನಾಯಕತ್ವ ಮತ್ತು ಆಡಳಿತದ ಬಗ್ಗೆ ನನ್ನ ಅಭಿಪ್ರಾಯವನ್ನು ಸದಾ ನಿರ್ಭಯವಾಗಿ ವ್ಯಕ್ತಪಡಿಸಿದ್ದೇನೆ. ಮುಂದೆಯೂ ಅದೇ ರೀತಿಯ ಸಂಬಂಧ ಮುಂದುವರಿಯಲಿದೆ” ಎಂದು ತಿಳಿಸಿದರು.

ರಾಜಕೀಯ ಜೀವನದಲ್ಲಿ ಏಳು ದಶಕಗಳನ್ನು ಪೂರೈಸಿರುವ ತಾವು ಜನಸೇವೆಯನ್ನೇ ಧ್ಯೇಯವಾಗಿಸಿಕೊಂಡು ಕೆಲಸ ಮಾಡಿದ್ದೇನೆ ಎಂದು ಹೇಳಿದ ಅವರು, “ರಾಜ್ಯ ಸಭಾ ಸದಸ್ಯರಾಗಬೇಕೆಂಬ ವ್ಯಾಮೋಹ ನನಗಿದ್ದರೆ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಪ್ರಯತ್ನ ಮಾಡಬಹುದಾಗಿತ್ತು. ಆದರೆ ನಮ್ಮ ಪಕ್ಷವೇ ರಾಜ್ಯಸಭೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿತ್ತು” ಎಂದರು.

ಜೆಡಿಎಸ್ ರಾಜ್ಯ ಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಕುರಿತು ಪ್ರಸ್ತಾಪಿಸಿದ ಅವರು, “ನಮ್ಮ ಬಳಿ ಸೀಮಿತ ಸಂಖ್ಯೆಯ ಶಾಸಕರು ಇಲ್ಲದೆ ಸ್ಥಾನಕ್ಕಾಗಿ ಒತ್ತಾಯಿಸುವುದು ಸರಿಯಲ್ಲ ಎಂಬ ನಿಲುವನ್ನು ಪಕ್ಷ ತೆಗೆದುಕೊಂಡಿತ್ತು. ಅದಕ್ಕಾಗಿ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ” ಎಂದು ಹೇಳಿದರು.

ರಾಜ್ಯ ಸಭಾ ಟಿಕೆಟ್ ಕುರಿತು ವಿವಿಧ ರೀತಿಯ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, “ಹಲವರು ನನಗೆ ಟಿಕೆಟ್ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷದ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ. ಈ ವಿಚಾರವನ್ನು ಅನಗತ್ಯವಾಗಿ ರಾಜಕೀಯಗೊಳಿಸುವ ಅಗತ್ಯವಿಲ್ಲ” ಎಂದು ಹೇಳಿದರು.

ಪಕ್ಷ ಸಂಘಟನೆಯ ವಿಚಾರವಾಗಿ ಮಾತನಾಡಿದ ದೇವೇಗೌಡರು, “ಜೆಡಿಎಸ್ ಬಲವರ್ಧನೆಗಾಗಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಭಾಗವಾಗಿದ್ದರೂ ಪಕ್ಷವನ್ನು ರಾಜ್ಯದಾದ್ಯಂತ ಇನ್ನಷ್ಟು ಬಲಪಡಿಸುವ ಕೆಲಸ ಮುಂದುವರಿಯಲಿದೆ. ಮುಂಬರುವ ಮಹಾನಗರ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ” ಎಂದು ತಿಳಿಸಿದರು.

ರಾಜ್ಯ ಸಭಾ ಸ್ಥಾನ ಸಿಗದಿದ್ದರೂ ಸಾರ್ವಜನಿಕ ಜೀವನ, ಪಕ್ಷ ಸಂಘಟನೆ ಮತ್ತು ರಾಷ್ಟ್ರೀಯ ವಿಚಾರಗಳಲ್ಲಿ ತಮ್ಮ ಪಾತ್ರ ಮುಂದುವರಿಯಲಿದೆ ಎಂಬ ಸಂದೇಶವನ್ನು ದೇವೇಗೌಡರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande