ರಾಜ್ಯ ಸಭೆ ಚುನಾವಣೆ ; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, 10 ಜೂನ್ (ಹಿ.ಸ.) : ಆ್ಯಂಕರ್ : ಮಧ್ಯ ಪ್ರದೇಶ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡ
Siddaramaiah file photo


ಬೆಂಗಳೂರು, 10 ಜೂನ್ (ಹಿ.ಸ.) :

ಆ್ಯಂಕರ್ : ಮಧ್ಯ ಪ್ರದೇಶ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾವಧಿಯ ಆಡಳಿತವನ್ನು ಬಿಜೆಪಿ ಪ್ರಜಾಪ್ರಭುತ್ವದ ಮೈಲಿಗಲ್ಲು ಎಂದು ಸಂಭ್ರಮಿಸುತ್ತಿರುವ ದಿನವೇ, ಮಧ್ಯಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಕಾನೂನುಬಾಹಿರವಾಗಿ ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರವು ಸಾಮಾನ್ಯ ಆಡಳಿತಾತ್ಮಕ ನಿರ್ಧಾರವಲ್ಲ, ಬದಲಾಗಿ ರಾಜಕೀಯ ಪ್ರೇರಿತ ಪಿತೂರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವಷ್ಟು ಸಂಖ್ಯಾಬಲ ಹೊಂದಿದ್ದರೂ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಬಳಿಕ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಹಣದ ಆಮಿಷ ಒಡ್ಡುವ ಪ್ರಯತ್ನ ನಡೆಸಲಾಯಿತು. ಆ ಪ್ರಯತ್ನಗಳು ವಿಫಲವಾದಾಗ ಚುನಾವಣಾ ವ್ಯವಸ್ಥೆಯನ್ನು ಬಳಸಿಕೊಂಡು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಾಮಪತ್ರ ತಿರಸ್ಕಾರಕ್ಕೆ ನೀಡಲಾದ ಕಾರಣ ಕಾನೂನಾತ್ಮಕವಾಗಿ ಸಮರ್ಥನೀಯವಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಖಾಸಗಿ ದೂರು ಮಾತ್ರ ಕ್ರಿಮಿನಲ್ ಪ್ರಕರಣವಾಗುವುದಿಲ್ಲ ಹಾಗೂ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದ ನಂತರವೇ ಅದು ಪ್ರಕರಣದ ಸ್ವರೂಪ ಪಡೆಯುತ್ತದೆ. ಕೇವಲ ನ್ಯಾಯಾಲಯದ ನೋಟಿಸ್ನ್ನು ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದಾರೆ.

ಚುನಾವಣಾಧಿಕಾರಿಗಳ ಮುಂದೆ ಈ ಕಾನೂನು ಅಂಶಗಳನ್ನು ಮಂಡಿಸಿದ್ದರೂ ನಾಮಪತ್ರವನ್ನು ತಿರಸ್ಕರಿಸಿರುವುದು ನಿರ್ಧಾರದ ನಿಷ್ಪಕ್ಷಪಾತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಪ್ರಾಮಾಣಿಕವಾಗಿ ಗೆಲ್ಲಲು ಸಾಧ್ಯವಾಗದ ಸ್ಥಾನವನ್ನು ರಾಜಕೀಯ ಪ್ರಭಾವದ ಮೂಲಕ ಗೆಲ್ಲುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಮುಂದುವರಿದು, ಮತದಾರರ ಪಟ್ಟಿಯ ವಿಶೇಷ ತಿದ್ದುಪಡಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಮತ ಕಳ್ಳತನದ ಜೊತೆಗೆ ಈಗ ಸ್ಥಾನ ಕಳ್ಳತನವೂ ನಡೆಯುತ್ತಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಸಂಸತ್ತಿನಲ್ಲಿ ಕೃತಕ ಬಹುಮತ ಸೃಷ್ಟಿಸಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಕಾನೂನುಗಳನ್ನು ಅಂಗೀಕರಿಸುವ ಉದ್ದೇಶ ಇದಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ಈ ದಾಳಿಯನ್ನು ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸುತ್ತದೆ. ಜನರೊಂದಿಗೆ ಸೇರಿ ಪ್ರಜಾಪ್ರಭುತ್ವದ ಎಲ್ಲ ಮಾರ್ಗಗಳ ಮೂಲಕ ಈ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಸಿದ್ದರಾಮಯ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande