
ಬೆಂಗಳೂರು, 01 ಜೂನ್ (ಹಿ.ಸ.) :
ಆ್ಯಂಕರ್ : ಬೇಸಿಗೆ ಕಾಲ ಬಂದಾಗ ಮಾವಿನ ಹಣ್ಣಿನ ಸುವಾಸನೆ ಮನೆಮನೆಗೂ ಹರಡುತ್ತದೆ. ಈ ಸಮಯದಲ್ಲಿ ಕರಾವಳಿ ಭಾಗದ ಸಾಂಪ್ರದಾಯಿಕ ಅಡುಗೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ತಿನಿಸುಗಳಲ್ಲಿ ಕುಂದಾಪುರ ಶೈಲಿಯ ಮಾವಿನ ಹಣ್ಣಿನ ಗೊಜ್ಜು ಕೂಡ ಒಂದು. ಸಿಹಿ, ಖಾರ ಮತ್ತು ಹುಳಿ ರುಚಿಗಳ ಸಮತೋಲನದಿಂದ ತಯಾರಾಗುವ ಈ ಗೊಜ್ಜು, ಬಿಸಿ ಅನ್ನದ ಜೊತೆಗೆ ಸವಿದರೆ ವಿಶಿಷ್ಟ ರುಚಿಯನ್ನು ನೀಡುತ್ತದೆ.
ಕುಂದಾಪುರ ಹಾಗೂ ಉಡುಪಿ ಭಾಗಗಳಲ್ಲಿ ಹಲವು ತಲೆಮಾರುಗಳಿಂದ ತಯಾರಾಗುತ್ತಿರುವ ಈ ಸಾಂಪ್ರದಾಯಿಕ ಖಾದ್ಯ, ಅಜ್ಜಿ ಮನೆಯ ಅಡುಗೆಯ ನೆನಪುಗಳನ್ನು ಮರುಕಳಿಸುತ್ತದೆ.
ಸರಳ ಪದಾರ್ಥಗಳಿಂದ ಕಡಿಮೆ ಸಮಯದಲ್ಲಿ ಸಿದ್ಧಗೊಳ್ಳುವ ಈ ಗೊಜ್ಜು, ಮನೆಯ ಎಲ್ಲರ ಮೆಚ್ಚಿನ ತಿನಿಸಾಗುವಲ್ಲಿ ಅನುಮಾನವೇ ಇಲ್ಲ.
ಬೇಕಾಗುವ ಸಾಮಗ್ರಿಗಳು: ಹಣ್ಣಾದ ಮಾವಿನ ಹಣ್ಣು – 2
ಬೆಲ್ಲ – 2 ರಿಂದ 3 ಚಮಚ
ಒಣ ಮೆಣಸಿನಕಾಯಿ – 4 ರಿಂದ 5
ತೆಂಗಿನ ತುರಿ – ಅರ್ಧ ಕಪ್
ಸಾಸಿವೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ಕಾಲು ಚಮಚ
ನೀರು – ಅಗತ್ಯಕ್ಕೆ ತಕ್ಕಷ್ಟುು.
ತಯಾರಿಸುವ ವಿಧಾನ: ಮೊದಲು ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆಯದೆ ತುಂಡುಗಳಾಗಿ ಕತ್ತರಿಸಬೇಕು. ನಂತರ ಒಂದು ಪಾತ್ರೆಯಲ್ಲಿ ಮಾವಿನ ಹಣ್ಣಿನ ತುಂಡುಗಳು, ಅರಿಶಿನ ಮತ್ತು ಸ್ವಲ್ಪ ನೀರು ಹಾಕಿ ಮೃದುವಾಗುವವರೆಗೆ ಬೇಯಿಸಬೇಕು.
ಇನ್ನೊಂದು ಕಡೆ ತೆಂಗಿನ ತುರಿ, ಒಣ ಮೆಣಸಿನಕಾಯಿ ಮತ್ತು ಸಾಸಿವೆಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಮಸಾಲೆ ಪೇಸ್ಟ್ ಅನ್ನು ಬೇಯಿಸಿದ ಮಾವಿನ ಹಣ್ಣಿಗೆ ಸೇರಿಸಿ ಚೆನ್ನಾಗಿ ಕಲಸಬೇಕು. ಬಳಿಕ ಉಪ್ಪು ಮತ್ತು ಬೆಲ್ಲ ಸೇರಿಸಿ ಸುಮಾರು ಐದುರಿಂದ ಏಳು ನಿಮಿಷಗಳ ಕಾಲ ಕುದಿಯಲು ಬಿಡಬೇಕು. ಎಲ್ಲಾ ರುಚಿಗಳು ಒಂದಕ್ಕೊಂದು ಚೆನ್ನಾಗಿ ಬೆರೆತ ಬಳಿಕ ಒಲೆಯಿಂದ ಇಳಿಸಬೇಕು.
ಸಂಗ್ರಹಣೆ: ಗೊಜ್ಜು ಸಂಪೂರ್ಣ ತಣ್ಣಗಾದ ನಂತರ ಫ್ರಿಜ್ನಲ್ಲಿ ಇಟ್ಟರೆ ಎರಡು ರಿಂದ ಮೂರು ದಿನಗಳವರೆಗೆ ಉತ್ತಮವಾಗಿ ಉಳಿಯುತ್ತದೆ. ರುಚಿ ಮತ್ತು ಗುಣಮಟ್ಟ ಕಾಪಾಡಿಕೊಳ್ಳಲು ಯಾವಾಗಲೂ ಸ್ವಚ್ಛ ಹಾಗೂ ಒಣ ಚಮಚವನ್ನೇ ಬಳಸುವುದು ಸೂಕ್ತ.
ಸವಿಯುವ ವಿಧಾನ: ಈ ಸಾಂಪ್ರದಾಯಿಕ ಗೊಜ್ಜನ್ನು ಬಿಸಿ ಬಿಸಿ ಅನ್ನದೊಂದಿಗೆ ಸವಿಯಬಹುದು. ತುಪ್ಪದ ಜೊತೆ ಅನ್ನಕ್ಕೆ ಬೆರೆಸಿ ತಿಂದರೆ ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ. ದೋಸೆ, ಚಪಾತಿ ಹಾಗೂ ಇತರ ತಿಂಡಿಗಳ ಜೊತೆಯೂ ಇದು ಉತ್ತಮ ಹೊಂದಾಣಿಕೆಯನ್ನು ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.