ಸ್ವದೇಶಿ ಟೈಪ್-IV ಸಿಎನ್ಜಿ ಸಿಲಿಂಡರ್ ಉತ್ಪಾದನೆಗೆ ಕೇಂದ್ರ–ಎನ್ಟಿಎಫ್ ಒಪ್ಪಂದ
ನವದೆಹಲಿ, 07 ಮೇ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಶುದ್ಧ ಇಂಧನ ಆಧಾರಿತ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಸ್ವದೇಶಿ ತಂತ್ರಜ್ಞಾನ ಬಳಸಿ ಟೈಪ್-IV ಸಿಎನ್ಜಿ ಸಿಲಿಂಡರ್ಗಳ ವಾಣಿಜ್ಯ ಉತ್ಪಾದನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧ
MoU


ನವದೆಹಲಿ, 07 ಮೇ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಶುದ್ಧ ಇಂಧನ ಆಧಾರಿತ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಸ್ವದೇಶಿ ತಂತ್ರಜ್ಞಾನ ಬಳಸಿ ಟೈಪ್-IV ಸಿಎನ್ಜಿ ಸಿಲಿಂಡರ್ಗಳ ವಾಣಿಜ್ಯ ಉತ್ಪಾದನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ) ಹಾಗೂ ಎನ್ಟಿಎಫ್ ಎನರ್ಜಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಈ ಯೋಜನೆಯಡಿ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ದೇಶೀಯ ತಂತ್ರಜ್ಞಾನ ಆಧಾರಿತ ಸುಧಾರಿತ ಸಿಎನ್ಜಿ ಸಿಲಿಂಡರ್ಗಳನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಕಾರ, ಈ ಯೋಜನೆ ‘ಆತ್ಮನಿರ್ಭರ ಭಾರತ’ ಹಾಗೂ ‘ಶುದ್ಧ ಇಂಧನ ಚಲನಶೀಲತೆ’ ದೃಷ್ಟಿಕೋನಕ್ಕೆ ಅನುಗುಣವಾಗಿದ್ದು, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವುದು, ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಟೈಪ್-IV ಸಂಯೋಜಿತ ಸಿಎನ್ಜಿ ಸಿಲಿಂಡರ್ಗಳು ಸಾಂಪ್ರದಾಯಿಕ ಉಕ್ಕಿನ ಸಿಲಿಂಡರ್ಗಳಿಗೆ ಹೋಲಿಸಿದರೆ ಸುಮಾರು 75 ಶೇಕಡಾ ಹಗುರವಾಗಿವೆ. ಇದರಿಂದ ವಾಹನಗಳ ಇಂಧನ ದಕ್ಷತೆ ಹೆಚ್ಚುವುದರ ಜೊತೆಗೆ ಹೊರಸೂಸುವಿಕೆಯೂ ಕಡಿಮೆಯಾಗುತ್ತದೆ. ಈ ಸಿಲಿಂಡರ್ಗಳಲ್ಲಿ ತುಕ್ಕು-ನಿರೋಧಕ ಪಾಲಿಮರ್ ಲೈನರ್, ಸುಧಾರಿತ ಕಾರ್ಬನ್ ಫೈಬರ್ ಬಲವರ್ಧಿತ ಪಾಲಿಮರ್ ಲೇ-ಅಪ್ ತಂತ್ರಜ್ಞಾನ ಹಾಗೂ ಯಾಂತ್ರಿಕ ಲಾಕಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.

ಸುರಕ್ಷತಾ ದೃಷ್ಟಿಯಿಂದಲೂ ಈ ಸಿಲಿಂಡರ್ಗಳು ಹೆಚ್ಚು ವಿಶ್ವಾಸಾರ್ಹವಾಗಿದ್ದು, ಅವುಗಳ ಬರ್ಸ್ಟ್ ಒತ್ತಡ ಸಾಮರ್ಥ್ಯ 600 ಬಾರ್ಗಿಂತ ಅಧಿಕವಾಗಿದೆ. ಇದು ಅಂತರರಾಷ್ಟ್ರೀಯ ನಿಯಂತ್ರಣ ಮಾನದಂಡಗಳಿಗಿಂತಲೂ ಮೇಲಾಗಿದ್ದು, ಸುರಕ್ಷತೆಯ ಮಟ್ಟವನ್ನು ಮತ್ತಷ್ಟು ಬಲಪಡಿಸುತ್ತದೆ.

ಟಿಡಿಬಿ ಕಾರ್ಯದರ್ಶಿ ರಾಜೇಶ್ ಕುಮಾರ್ ಪಾಠಕ್ ಮಾತನಾಡಿ, “ಸ್ವದೇಶಿ ತಂತ್ರಜ್ಞಾನದಿಂದ ತಯಾರಾಗುವ ಈ ಸುಧಾರಿತ ಸಿಲಿಂಡರ್ಗಳ ವಾಣಿಜ್ಯ ಉತ್ಪಾದನೆ ಭಾರತದಲ್ಲಿ ಸ್ವಚ್ಛ ಚಲನಶೀಲ ಮೂಲಸೌಕರ್ಯ ಮತ್ತು ಸ್ಥಳೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಿದೆ” ಎಂದು ಹೇಳಿದರು.

ಎನ್ಟಿಎಫ್ ಎನರ್ಜಿ ಸೊಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಜೈನ್ ಹಾಗೂ ನಿರ್ದೇಶಕ ನಮನ್ ಜೈನ್ ಪ್ರತಿಕ್ರಿಯಿಸಿ, “ಟಿಡಿಬಿಯ ಬೆಂಬಲದಿಂದ ತಂತ್ರಜ್ಞಾನದ ವಾಣಿಜ್ಯೀಕರಣ ವೇಗ ಪಡೆಯಲಿದ್ದು, ಸ್ವಚ್ಛ ಹಾಗೂ ಪರಿಣಾಮಕಾರಿ ಸಾರಿಗೆ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಅವಕಾಶಗಳು ಸಿಗಲಿವೆ” ಎಂದು ಅಭಿಪ್ರಾಯಪಟ್ಟರು.

ಈ ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳು ಮತ್ತು ಸುಧಾರಿತ ಉತ್ಪಾದನಾ ವಿಧಾನಗಳನ್ನು ಬಳಸಿಕೊಳ್ಳಲಾಗುವುದು. ಇದರಿಂದ ಉತ್ಪಾದನಾ ವೆಚ್ಚ ಸ್ಪರ್ಧಾತ್ಮಕ ಮಟ್ಟದಲ್ಲಿ ಉಳಿಯುವುದರ ಜೊತೆಗೆ, ದೇಶದಲ್ಲಿ ಹೆಚ್ಚಿನ ಒತ್ತಡದ ಸಂಯೋಜಿತ ಸಿಲಿಂಡರ್ಗಳ ಭವಿಷ್ಯಮುಖಿ ಪೂರೈಕೆ ಸರಪಳಿಯೂ ನಿರ್ಮಾಣವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande