ಭಾರತ–ವಿಯೆಟ್ನಾಂ ಸಂಬಂಧಗಳಿಗೆ ಹೊಸ ದಿಕ್ಕು : ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, 06 ಮೇ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ವಿಯೆಟ್ನಾಂ ನಡುವಿನ ಬಾಂಧವ್ಯವು ಹೊಸ ಉನ್ನತ ಹಂತಕ್ಕೆ ಏರಿದ್ದು, “ನಾವು ಒಟ್ಟಿಗೆ ನಡೆಯುತ್ತೇವೆ, ಒಟ್ಟಿಗೆ ಬೆಳೆಯುತ್ತೇವೆ ಮತ್ತು ಒಟ್ಟಿಗೆ ಗೆಲ್ಲುತ್ತೇವೆ” ಎಂದು ಹೇಳಿದರು. ವಿಯೆಟ್ನಾಂ ಅಧ್ಯಕ್ಷ ಥೋ ಲಾಮ್ ಅವರೊ
Pm


ನವದೆಹಲಿ, 06 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ವಿಯೆಟ್ನಾಂ ನಡುವಿನ ಬಾಂಧವ್ಯವು ಹೊಸ ಉನ್ನತ ಹಂತಕ್ಕೆ ಏರಿದ್ದು, “ನಾವು ಒಟ್ಟಿಗೆ ನಡೆಯುತ್ತೇವೆ, ಒಟ್ಟಿಗೆ ಬೆಳೆಯುತ್ತೇವೆ ಮತ್ತು ಒಟ್ಟಿಗೆ ಗೆಲ್ಲುತ್ತೇವೆ” ಎಂದು ಹೇಳಿದರು.

ವಿಯೆಟ್ನಾಂ ಅಧ್ಯಕ್ಷ ಥೋ ಲಾಮ್ ಅವರೊಂದಿಗೆ ಬುಧವಾರ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ, ಉಭಯ ದೇಶಗಳು ತಮ್ಮ ಸಂಬಂಧವನ್ನು “ವರ್ಧಿತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ” ಮಟ್ಟಕ್ಕೆ ಏರಿಸಲು ನಿರ್ಧರಿಸಿವೆ. ವ್ಯಾಪಾರ, ರಕ್ಷಣಾ, ಸಂಪರ್ಕ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಹೊಸ ವೇಗ ನೀಡುವ ಮಹತ್ವದ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ.

ಪ್ರಧಾನಿ ಮೋದಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲಾಮ್ ಅವರ ಭಾರತ ಭೇಟಿ ಎರಡೂ ರಾಷ್ಟ್ರಗಳ ಆಳವಾದ ಸ್ನೇಹ ಮತ್ತು ಪರಸ್ಪರ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ಹೊಸ ಹಂತವು ಇನ್ನಷ್ಟು ಮಹತ್ವಾಕಾಂಕ್ಷಿ ಗುರಿಗಳನ್ನು ಸಾಧಿಸಲು ದಾರಿ ಮಾಡಿಕೊಡಲಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಭಾರತ–ವಿಯೆಟ್ನಾಂ ವ್ಯಾಪಾರ ದ್ವಿಗುಣಗೊಂಡು 16 ಬಿಲಿಯನ್ ಡಾಲರ್ ತಲುಪಿದೆ. 2030ರೊಳಗೆ ಇದನ್ನು 25 ಬಿಲಿಯನ್ ಡಾಲರ್ಗೆ ಏರಿಸುವ ಗುರಿ ಹೊಂದಲಾಗಿದೆ. ಔಷಧ, ಕೃಷಿ, ಮೀನುಗಾರಿಕೆ ಮತ್ತು ಪಶು ಉತ್ಪನ್ನಗಳ ವ್ಯಾಪಾರ ವಿಸ್ತರಣೆಗೆ ಒಪ್ಪಂದಗಳು ನೆರವಾಗಲಿವೆ. ಶೀಘ್ರದಲ್ಲೇ ವಿಯೆಟ್ನಾಂನಲ್ಲಿ ಭಾರತದ ದ್ರಾಕ್ಷಿ, ದಾಳಿಂಬೆ ಲಭ್ಯವಾಗಲಿದ್ದು, ಭಾರತದಲ್ಲಿ ವಿಯೆಟ್ನಾಂನ ಡ್ಯೂರಿಯನ್ ಮತ್ತು ಪೊಮೆಲೊ ದೊರೆಯಲಿವೆ.

ಭಾರತದ ಯುಪಿಐ ವ್ಯವಸ್ಥೆಯನ್ನು ವಿಯೆಟ್ನಾಂನ ತ್ವರಿತ ಪಾವತಿ ವ್ಯವಸ್ಥೆಯೊಂದಿಗೆ ಜೋಡಿಸಲು ಒಪ್ಪಂದವಾಗಿದೆ. ವಾಯು ಸಂಪರ್ಕ, ರಾಜ್ಯ-ರಾಜ್ಯ ಮತ್ತು ನಗರ-ನಗರ ಸಹಕಾರವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ನಿಯಮ ಆಧಾರಿತ ವ್ಯವಸ್ಥೆಯನ್ನು ಬಲಪಡಿಸಲು ರಕ್ಷಣಾ ಸಹಕಾರ ವೃದ್ಧಿಗೆ ಒತ್ತು ನೀಡಲಾಗಿದೆ. ವಿಯೆಟ್ನಾಂ ಭಾರತಕ್ಕೆ “ಆಕ್ಟ್ ಈಸ್ಟ್ ಪಾಲಿಸಿ”ಯ ಪ್ರಮುಖ ಭಾಗವಾಗಿದ್ದು, ಆಸಿಯಾನ್ ರಾಷ್ಟ್ರಗಳೊಂದಿಗೆ ಸಂಬಂಧ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಮೋದಿ ತಿಳಿಸಿದರು.

ಸಾಂಸ್ಕೃತಿಕ ಬಾಂಧವ್ಯ ಮತ್ತಷ್ಟು ಬಲ

ಚಂಪಾ ನಾಗರಿಕತೆಯ ದೇವಾಲಯಗಳ ಸಂರಕ್ಷಣೆ ಹಾಗೂ ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣದಂತಹ ಯೋಜನೆಗಳು ಉಭಯ ದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಬಲಪಡಿಸಲಿವೆ.

ಭಯೋತ್ಪಾದನೆ ವಿರುದ್ಧ ಏಕಮತ

ಪಹಲ್ಗಾಮ್ ದಾಳಿಯನ್ನು ಖಂಡಿಸಿ ಭಾರತದೊಂದಿಗೆ ನಿಂತ ವಿಯೆಟ್ನಾಂಗೆ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು. ಜಾಗತಿಕ ಸವಾಲುಗಳ ನಡುವೆಯೂ ಭಾರತ ಮತ್ತು ವಿಯೆಟ್ನಾಂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಾಗಿದ್ದು, ಈ ಹೊಸ ಪಾಲುದಾರಿಕೆ ಪರಸ್ಪರ ಅಭಿವೃದ್ಧಿಗೆ ದಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande