
ಗದಗ, 30 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಹಿತದೃಷ್ಟಿಯಿಂದ ಮನೆಯ ಕಸವನ್ನು ಕಡ್ಡಾಯವಾಗಿ ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ಪಟ್ಟಣ ಪಂಚಾಯತಿಯ ಕಸದ ವಾಹನಗಳಿಗೆ ನೀಡಬೇಕು ಎಂದು ಶಿರಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣವನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡುವ ಉದ್ದೇಶದಿಂದ ಹಸಿ ಕಸ, ಒಣ ಕಸ, ನೈರ್ಮಲ್ಯ ಕಸ ಹಾಗೂ ವಿಶೇಷ ಕಾಳಜಿ ಕಸ ಎಂಬ ನಾಲ್ಕು ವಿಭಾಗಗಳಲ್ಲಿ ತ್ಯಾಜ್ಯ ವಿಂಗಡಣೆ ಮಾಡುವುದು ಕಡ್ಡಾಯಗೊಳಿಸಲಾಗಿದೆ.
ಹಸಿ ಕಸವನ್ನು ಹಸಿರು ಬಕೆಟ್ನಲ್ಲಿ ಸಂಗ್ರಹಿಸಬೇಕು. ನೈಸರ್ಗಿಕವಾಗಿ ಕೊಳೆಯುವ ಹಾಗೂ ಗೊಬ್ಬರ ತಯಾರಿಕೆಗೆ ಬಳಸಬಹುದಾದ ಅಡುಗೆ ಮನೆ ಮತ್ತು ತೋಟದ ತ್ಯಾಜ್ಯವನ್ನು ಇದರಲ್ಲಿ ಸೇರಿಸಬೇಕು. ಅಡುಗೆ ಮನೆ ತ್ಯಾಜ್ಯ, ತರಕಾರಿ ಮತ್ತು ಹಣ್ಣಿನ ಸಿಪ್ಪೆಗಳು, ಉಳಿದ ಆಹಾರ, ಟೀ ಹಾಗೂ ಕಾಫಿ ಪುಡಿ ಮೊದಲಾದವುಗಳು ಹಸಿ ಕಸದ ವ್ಯಾಪ್ತಿಗೆ ಬರುತ್ತವೆ.
ಒಣ ಕಸವನ್ನು ನೀಲಿ ಬಕೆಟ್ನಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಮರುಬಳಕೆ ಮಾಡಬಹುದಾದ ಸ್ವಚ್ಛ ವಸ್ತುಗಳಾದ ಪ್ಲಾಸ್ಟಿಕ್ ವಸ್ತುಗಳು, ಕಾಗದ, ರಟ್ಟಿನ ಪೆಟ್ಟಿಗೆಗಳು, ಲೋಹದ ವಸ್ತುಗಳು, ಬಟ್ಟೆ ಹಾಗೂ ರಬ್ಬರ್ ವಸ್ತುಗಳನ್ನು ಒಣ ಕಸದ ವಿಭಾಗದಲ್ಲಿ ನೀಡಬೇಕು ಎಂದು ಸೂಚಿಸಲಾಗಿದೆ.
ನೈರ್ಮಲ್ಯ ಕಸವನ್ನು ಕೆಂಪು ಬಕೆಟ್ನಲ್ಲಿ ಸಂಗ್ರಹಿಸಿ ಕಡ್ಡಾಯವಾಗಿ ಪತ್ರಿಕೆಯಲ್ಲಿ ಸುತ್ತಿ, ಕೆಂಪು ಗುರುತು ಹಾಕಿ ನೀಡಬೇಕು. ಆರೋಗ್ಯದ ದೃಷ್ಟಿಯಿಂದ ಅತ್ಯಂತ ಜಾಗರೂಕತೆಯಿಂದ ವಿಲೇವಾರಿ ಮಾಡಬೇಕಾದ ಬಳಸಿದ ಡೈಪರ್ಗಳು, ಸ್ಯಾನಿಟರಿ ನ್ಯಾಪ್ಕಿನ್ಗಳು, ಟ್ಯಾಂಪೋನ್ಗಳು ಸೇರಿದಂತೆ ವೈಯಕ್ತಿಕ ತ್ಯಾಜ್ಯವನ್ನು ಈ ವಿಭಾಗದಲ್ಲಿ ಸೇರಿಸಬೇಕು ಎಂದು ತಿಳಿಸಲಾಗಿದೆ.
ವಿಶೇಷ ಕಾಳಜಿ ಕಸವನ್ನು ಕಪ್ಪು ಬಕೆಟ್ನಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಪರಿಸರಕ್ಕೆ ಹಾನಿ ಉಂಟುಮಾಡುವ ಬಣ್ಣದ ಡಬ್ಬಿಗಳು, ಕೀಟನಾಶಕ ಬಾಟಲಿಗಳು, ಸಿಎಫ್ಎಲ್ ಬಲ್ಬ್ಗಳು, ಟ್ಯೂಬ್ಲೈಟ್ಗಳು, ವೈದ್ಯಕೀಯ ತ್ಯಾಜ್ಯ ಹಾಗೂ ಹಳೆಯ ಬ್ಯಾಟರಿಗಳನ್ನು ಈ ವಿಭಾಗದಲ್ಲಿ ವಿಲೇವಾರಿ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.
ನಾಲ್ಕು ವಿಭಾಗಗಳಾಗಿ ಪ್ರತ್ಯೇಕಿಸದ ಮಿಶ್ರ ಕಸವನ್ನು ಪಟ್ಟಣ ಪಂಚಾಯತಿ ವಾಹನದಲ್ಲಿ ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾತ್ಮಕ ಕ್ರಮ ಜರುಗಿಸಲಾಗುವುದು. ಅಗತ್ಯವಿದ್ದಲ್ಲಿ ವಿದ್ಯುತ್ ಹಾಗೂ ನೀರಿನ ಸರಬರಾಜು ಸ್ಥಗಿತಗೊಳಿಸುವ ಕ್ರಮಕ್ಕೂ ಮುಂದಾಗಲಾಗುವುದು ಎಂದು ಶಿರಹಟ್ಟಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಸ ವಿಂಗಡಣೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿಡಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP