
ಬೆಂಗಳೂರು, 30 ಮೇ (ಹಿ.ಸ.) :
ಆ್ಯಂಕರ್ : ಗ್ರಾಮೀಣ ಪ್ರದೇಶಗಳಲ್ಲಿ ಜ್ಞಾನ, ಮಾಹಿತಿ ಮತ್ತು ಕೌಶಲ್ಯ ವೃದ್ಧಿಗೆ ಪೂರಕವಾಗಿರುವ ಅರಿವು ಕೇಂದ್ರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶದಿಂದ ರಾಜ್ಯದ ಪ್ರತಿ ಜಿಲ್ಲೆಯ ಮೂರು ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಒಂದು ದಿನದ ರಾಜ್ಯಮಟ್ಟದ “ಅರಿವು ಕೇಂದ್ರಗಳ ಅಭಿವೃದ್ಧಿ” ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಾಗಾರವನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹದೇವನ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಪರಿಷ್ಕೃತ ಇಂಗ್ಲಿಷ್ ಸ್ವಾಧೀನ ಮತ್ತು ಅಭಿವೃದ್ಧಿ ಪುಸ್ತಕವನ್ನು ವಿತರಿಸಿ, ಅರಿವು ಕೇಂದ್ರಗಳ ಮೂಲಕ ಗ್ರಾಮೀಣ ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷಾ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುವಂತೆ ಕರೆ ನೀಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮೇಲ್ವಿಚಾರಕರು ತಮ್ಮ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ವಿವಿಧ ಚಟುವಟಿಕೆಗಳು, ಸಾಧನೆಗಳು ಹಾಗೂ ಯಶೋಗಾಥೆಗಳನ್ನು ಹಂಚಿಕೊಂಡರು.
ಈ ವೇಳೆ ಅವರ ಕಾರ್ಯವನ್ನು ಶ್ಲಾಘಿಸಿದ ಉಮಾ ಮಹದೇವನ್ ಅವರು, ಅರಿವು ಕೇಂದ್ರಗಳನ್ನು ಕೇವಲ ಓದು ಮತ್ತು ಮಾಹಿತಿ ಕೇಂದ್ರಗಳಾಗಿಯೇ ಸೀಮಿತಗೊಳಿಸದೆ, ಸಮುದಾಯದ ಸಮಗ್ರ ಅಭಿವೃದ್ಧಿಗೆ ನೆರವಾಗುವ ಜ್ಞಾನ ಕೇಂದ್ರಗಳನ್ನಾಗಿ ರೂಪಿಸಲು ಸಲಹೆ ನೀಡಿದರು.
ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಹೊಸ ಆವಿಷ್ಕಾರಗಳು ಹಾಗೂ ವಿನೂತನ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಮೇಲ್ವಿಚಾರಕರಿಗೆ ಸೂಚಿಸಿದರು.
ಕಾರ್ಯಾಗಾರದ ಅಂಗವಾಗಿ ಭಾರತ್ ಡಿಜಿಟಲ್ ಫೆಲೋಸ್ ಪ್ರತಿನಿಧಿಗಳು ವಾಟ್ಸಾಪ್ ಚಾಟ್ಬಾಟ್ ಬಳಕೆಯ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ಚಾಟ್ಬಾಟ್ ಮೂಲಕ ಮಾಹಿತಿ ವಿನಿಮಯ, ಸೇವೆಗಳ ಸುಲಭ ಲಭ್ಯತೆ ಹಾಗೂ ಅರಿವು ಕೇಂದ್ರಗಳ ಕಾರ್ಯನಿರ್ವಹಣೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯ ಕುರಿತು ವಿವರಿಸಲಾಯಿತು.
ತಂತ್ರಜ್ಞಾನವನ್ನು ಗ್ರಾಮೀಣ ಜನರ ಹತ್ತಿರಕ್ಕೆ ಕೊಂಡೊಯ್ಯುವಲ್ಲಿ ಇಂತಹ ಡಿಜಿಟಲ್ ಸಾಧನಗಳು ಪ್ರಮುಖ ಪಾತ್ರ ವಹಿಸಲಿದ್ದು, ಅರಿವು ಕೇಂದ್ರಗಳ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ನೆರವಾಗಲಿವೆ ಎಂದು ತರಬೇತುದಾರರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಆಯುಕ್ತಾಲಯದ ನಿರ್ದೇಶಕರಾದ ಅಮರೇಶ್ ಆರ್., ಉಪ ನಿರ್ದೇಶಕರಾದ ಕೃಷ್ಣಕುಮಾರ್, ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ ಸಮಾಲೋಚಕರಾದ ಡಾ. ಸಿ.ಎಚ್. ವಸುಂಧರಾ ದೇವಿ ಸೇರಿದಂತೆ ಆಯುಕ್ತಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.