
ಚಿತ್ರದುರ್ಗ, 30 ಮೇ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆಯವರು, ಸಹಾಯಕರು ಹಾಗೂ ರಾತ್ರಿ ಕಾವಲುಗಾರರು ತಮ್ಮ ಕರ್ತವ್ಯದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಸಮಯಪಾಲನೆಯನ್ನು ರೂಢಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್ ಕರೆ ನೀಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಪಿಯುಸಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹಾಸ್ಟೆಲ್ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದ್ದು, ಸಣ್ಣ ವಯಸ್ಸಿನ ಮಕ್ಕಳು ಸಿಬ್ಬಂದಿಯನ್ನು ನೋಡಿ ಶಿಸ್ತು ಮತ್ತು ಜೀವನ ಮೌಲ್ಯಗಳನ್ನು ಕಲಿಯುತ್ತಾರೆ. ಆದ್ದರಿಂದ ಸಿಬ್ಬಂದಿ ಉತ್ತಮ ನಡವಳಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದ ಅವರು, ಆರನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಬಿಸಿಎಂ ಹಾಸ್ಟೆಲ್ನಲ್ಲೇ ವಿದ್ಯಾಭ್ಯಾಸ ಮಾಡಿದ್ದು, ಅಂದಿನ ಅಡುಗೆ ಸಿಬ್ಬಂದಿಯ ಪ್ರೋತ್ಸಾಹವೇ ತಮ್ಮ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ. ಪರಮೇಶ್ವರಪ್ಪ ಮಾತನಾಡಿ, 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಹಿನ್ನೆಲೆಯಲ್ಲಿ ವಸತಿ ನಿಲಯಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಎರಡು ತಿಂಗಳ ಬೇಸಿಗೆ ರಜೆಯ ಬಳಿಕ ಮರಳುವ ವಿದ್ಯಾರ್ಥಿಗಳನ್ನು ‘ಪ್ರಾರಂಭೋತ್ಸವ’ ಮೂಲಕ ಸ್ವಾಗತಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ರಾಜ್ಯದ ಹಲವು ಭಾಗಗಳಿಂದ ಬಂದಿರುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಗುಣಮಟ್ಟದ ಆಹಾರ ಮತ್ತು ಉತ್ತಮ ಆರೈಕೆ ಒದಗಿಸುವ ಜವಾಬ್ದಾರಿ ಸಿಬ್ಬಂದಿಯ ಮೇಲಿದೆ ಎಂದು ಹೇಳಿದರು. ಸಿಬ್ಬಂದಿಗೆ ಆಯುಷ್ಮಾನ್ ಕಾರ್ಡ್ ಸೌಲಭ್ಯ ಕಲ್ಪಿಸಲಾಗಿದ್ದು, ಪ್ರತಿ ತಿಂಗಳು ನಿಯಮಿತವಾಗಿ ವೇತನ ಪಾವತಿಸಲಾಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಅಡುಗೆ ಮನೆಗಳ ಅಗ್ನಿ ಸುರಕ್ಷತೆ ಹಾಗೂ ಅನಿಲ ಸೋರಿಕೆ ತಡೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಆರೋಗ್ಯ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಾಸ್ಟೆಲ್ ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.