
ಗದಗ, 30 ಮೇ (ಹಿ.ಸ.) :
ಆ್ಯಂಕರ್ : 2026-27ನೇ ಸಾಲಿನ ರಾಷ್ಟ್ರೀಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (ಎಂಐಡಿಎಚ್) ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಹಾಗೂ ಎಣ್ಣೆ ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಪಡೆಯಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮುಂಡರಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆಗೆ ಸಂಬಂಧಿಸಿದಂತೆ ಕಂದು ಬಾಳೆ, ಅಂಗಾಂಶ ಬಾಳೆ, ಪಪ್ಪಾಯ, ಅಂಜೂರ, ದಾಳಿಂಬೆ, ಮಾವು, ಸೀಬೆ, ಹುಣಸೆ, ನಿಂಬೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಸೌಲಭ್ಯ ಕಲ್ಪಿಸಲಾಗಿದೆ.
ಇದರ ಜೊತೆಗೆ ಹೈಬ್ರಿಡ್ ತರಕಾರಿ ಬೆಳೆಗಳು, ಸೇವಂತಿಗೆ, ಚೆಂಡು ಹೂವು, ಮಲ್ಲಿಗೆ, ಸಾಂಬಾರು ಹಾಗೂ ಔಷಧೀಯ ಸಸ್ಯಗಳ ಬೆಳೆಗೆ ಸಹ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ.
ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೃಷಿಹೊಂಡ ನಿರ್ಮಾಣ, ಪ್ಲಾಸ್ಟಿಕ್ ಹೊದಿಕೆ, ಪಕ್ಷಿ ನಿರೋಧಕ ಬಲೆ, ಕಳೆ ಛಾಪೆ, ಸಣ್ಣ ಸಾಮರ್ಥ್ಯದ ಟ್ರ್ಯಾಕ್ಟರ್ಗಳು, ಫಾರ್ಮ್ಗೇಟ್ ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕ, ತಳ್ಳುವ ಗಾಡಿ ಸೇರಿದಂತೆ ವಿವಿಧ ಕೃಷಿ ಮೂಲಸೌಕರ್ಯ ಘಟಕಗಳಿಗೂ ನೆರವು ಒದಗಿಸಲಾಗುತ್ತಿದೆ.
ಮುಂದುವರಿದು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ನೀರಿನ ಸಮರ್ಪಕ ಬಳಕೆ ಹಾಗೂ ಆಧುನಿಕ ಕೃಷಿ ಪದ್ಧತಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. ರಾಜ್ಯ ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಸೇರಿದಂತೆ ವಿವಿಧ ಘಟಕಗಳಿಗೂ ರೈತರು ಸಹಾಯಧನ ಪಡೆಯಬಹುದಾಗಿದೆ.
ಆಸಕ್ತ ರೈತರು ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜೂನ್ 15ರೊಳಗಾಗಿ ಮುಂಡರಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿ.ಪಂ.) ಕಚೇರಿಗೆ ಸಲ್ಲಿಸಬಹುದಾಗಿದೆ.
ಮಾರ್ಗಸೂಚಿ ಅನ್ವಯ ಆಯ್ಕೆಯಾದ ರೈತರಿಗೆ ಆದ್ಯತೆ ಮೇರೆಗೆ ಹಾಗೂ ಜೇಷ್ಠತಾ ಕ್ರಮದ ಆಧಾರದ ಮೇಲೆ ಸಹಾಯಧನ ಮಂಜೂರು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸರ್ಕಾರದ ಈ ಯೋಜನೆಗಳ ಸೌಲಭ್ಯವನ್ನು ಪಡೆದು ತೋಟಗಾರಿಕೆ ಹಾಗೂ ಕೃಷಿ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಮುಂಡರಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP