ಲ್ಯಾಪ್ಟಾಪ್ ಖರೀದಿ ಹಾಗೂ ಕ್ರೀಡಾಪಟುಗಳಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ಗದಗ, 30 ಮೇ (ಹಿ.ಸ.) : ಆ್ಯಂಕರ್ : 2026-27ನೇ ಸಾಲಿನ ಎಸ್.ಎಫ್.ಸಿ. ಅನುದಾನದಡಿ ಇತರೆ ಹಿಂದುಳಿದ ಜನಾಂಗದ ವಿದ್ಯಾರ್ಥಿಗಳು ಹಾಗೂ ಅಂಗವಿಕಲ ವಿಕಲಚೇತನ ಫಲಾನುಭವಿಗಳ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಜೂನ್ 15ರೊಳಗಾಗಿ ಅರ್ಜಿ ಸಲ್ಲಿಸುವಂತೆ ಗದಗ-ಬೆ
ಫೋಟೋ


ಗದಗ, 30 ಮೇ (ಹಿ.ಸ.) :

ಆ್ಯಂಕರ್ : 2026-27ನೇ ಸಾಲಿನ ಎಸ್.ಎಫ್.ಸಿ. ಅನುದಾನದಡಿ ಇತರೆ ಹಿಂದುಳಿದ ಜನಾಂಗದ ವಿದ್ಯಾರ್ಥಿಗಳು ಹಾಗೂ ಅಂಗವಿಕಲ ವಿಕಲಚೇತನ ಫಲಾನುಭವಿಗಳ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಜೂನ್ 15ರೊಳಗಾಗಿ ಅರ್ಜಿ ಸಲ್ಲಿಸುವಂತೆ ಗದಗ-ಬೆಟಗೇರಿ ನಗರಸಭೆ ತಿಳಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು, ಶೇ.7.25ರ ಯೋಜನೆಯಡಿ ಇತರೆ ಹಿಂದುಳಿದ ಜನಾಂಗದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಖರೀದಿಗಾಗಿ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಅದೇ ರೀತಿ ಶೇ.5ರ ಯೋಜನೆಯಡಿ ಅಂಗವಿಕಲ ವಿಕಲಚೇತನ ಕ್ರೀಡಾಪಟುಗಳಿಗೆ ಸಹಾಯಧನ ಒದಗಿಸುವ ಯೋಜನೆ ಜಾರಿಯಲ್ಲಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶೇ.7.25ರ ಯೋಜನೆಯಡಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಬಿ.ಇ. ಇಂಜಿನಿಯರಿಂಗ್ ಅಥವಾ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿರುವವರಾಗಿರಬೇಕು. ಇಂತಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾಗುವ ಉದ್ದೇಶದಿಂದ ಲ್ಯಾಪ್ಟಾಪ್ ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ನಿವಾಸಿ ಪ್ರಮಾಣ ಪತ್ರ, ಕಾಲೇಜಿನ ಪ್ರಾಚಾರ್ಯರಿಂದ ಪಡೆದ ಚಾಲ್ತಿ ವ್ಯಾಸಂಗ ಪ್ರಮಾಣ ಪತ್ರ, ಶುಲ್ಕ ಪಾವತಿ ರಶೀದಿ ಹಾಗೂ ಹಿಂದಿನ ವರ್ಷದ ಅಂಕಪಟ್ಟಿಯ ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಶೇ.5ರ ಯೋಜನೆಯಡಿ ಅಂಗವಿಕಲ ವಿಕಲಚೇತನರ ಕಾರ್ಯಕ್ರಮದ ಅಡಿಯಲ್ಲಿ ಅಂತರರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮಾರ್ಗಸೂಚಿಯ ಅನುಸಾರ ಸಹಾಯಧನ ನೀಡಲಾಗುವುದು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಅಂಗವಿಕಲ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಲಾಗಿದೆ.

ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳು ನಿಗದಿತ ನಮೂನೆಯ ಅರ್ಜಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ನಿವಾಸಿ ಪ್ರಮಾಣ ಪತ್ರ, ಇಲಾಖೆಯಿಂದ ನೀಡಲಾಗಿರುವ ಕ್ರೀಡೆಯಲ್ಲಿ ಭಾಗವಹಿಸಿದ ಪ್ರಮಾಣ ಪತ್ರ, ಅಂಕಪಟ್ಟಿಯ ದೃಢೀಕೃತ ಪ್ರತಿ ಹಾಗೂ ಅಂಗವಿಕಲರ ಯುಡಿಐಡಿ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಎರಡೂ ಯೋಜನೆಗಳ ಸೌಲಭ್ಯಗಳು ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರಗಳಿಗಾಗಿ ಗದಗ-ಬೆಟಗೇರಿ ನಗರಸಭೆ ಕಚೇರಿಯ ಸಂಬಂಧಿಸಿದ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande