ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ : ಸಿದ್ದರಾಮಯ್ಯ
ಕಾರ್ಯದರ್ಶಿ. ಗೆ
ಸಿದ್ದರಾಮಯ್ಯ ಪತ್ರಿಕಾಗೋಷ್ಠಿ


ಸಿದ್ದರಾಮಯ್ಯ ರಾಜೀನಾಮೆ


ಬೆಂಗಳೂರು, 28 ಮೇ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಭಾವುಕವಾಗಿ ಪ್ರತಿಕ್ರಿಯಿಸಿದರು.

ರಾಜ್ಯಪಾಲರು ನಗರದಲ್ಲಿಲ್ಲದ ಕಾರಣ, ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾಗಿ ತಿಳಿಸಿದರು.

“ರಾಜ್ಯಪಾಲರು ಊರಿನಲ್ಲಿ ಇಲ್ಲ, ರಾತ್ರಿ ಬರುತ್ತಾರೆ ಎಂದು ಕಚೇರಿಯಲ್ಲಿ ತಿಳಿಸಿದರು. ಹೀಗಾಗಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಟ್ಟಿದ್ದೇನೆ. ರಾಜ್ಯಪಾಲರು ಬಂದ ಬಳಿಕ ನನ್ನ ರಾಜೀನಾಮೆ ಅಂಗೀಕರಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಸಂವಿಧಾನದ ಪ್ರಕಾರ ರಾಜೀನಾಮೆ ಅಂಗೀಕಾರ ಮಾಡಲೇಬೇಕು,” ಎಂದು ಹೇಳಿದರು.

ಹೈಕಮಾಂಡ್ ಸೂಚನೆ ಬಂದ ತಕ್ಷಣ ರಾಜೀನಾಮೆ ನೀಡಿದ್ದಾಗಿ ಸ್ಪಷ್ಟಪಡಿಸಿದ ಅವರು, “ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಹೈಕಮಾಂಡ್ ಯಾವಾಗ ಸೂಚನೆ ಕೊಡುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಅದರಂತೆ ಅವರು ಸೂಚಿಸಿದ ನಂತರ ರಾಜೀನಾಮೆ ಸಲ್ಲಿಸಿದ್ದೇನೆ,” ಎಂದರು.

ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, “ನಾನು ಹಳ್ಳಿಯಿಂದ ಬಂದವನು. ನಾನು ಶಾಸಕನಾಗುತ್ತೇನೆ, ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸೂ ಕಂಡಿರಲಿಲ್ಲ. ರಾಜಕೀಯಕ್ಕೆ ಬಂದದ್ದು ಆಕಸ್ಮಿಕ. ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿ ಇರಲಿಲ್ಲ,” ಎಂದು ಹೇಳಿದರು.

ತಮ್ಮ ರಾಜಕೀಯ ತತ್ವಗಳನ್ನು ಉಲ್ಲೇಖಿಸಿದ ಅವರು, “ಬುದ್ಧ, ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರ ಆದರ್ಶಗಳಲ್ಲಿ ನಂಬಿಕೆ ಇಟ್ಟುಕೊಂಡವನು. ಸಂವಿಧಾನವೇ ನಮ್ಮ ಧರ್ಮ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದರು.

ನಟ ರಾಜಕುಮಾರ ಅವರನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “ರಾಜಕುಮಾರ ಅವರು ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ನಾನು ರಾಜಕಾರಣಿ. ನನ್ನ ಪಾಲಿಗೆ ಮತದಾರರೇ ದೇವರು. ಕರ್ನಾಟಕದ 7 ಕೋಟಿ ಜನರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ,” ಎಂದರು.

ಇದೇ ವೇಳೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, “ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ, ಎರಡು ಬಾರಿ ವಿರೋಧ ಪಕ್ಷದ ನಾಯಕನಾಗುವ ಅವಕಾಶ ಸಿಕ್ಕಿದೆ. ಈ ಅವಕಾಶ ನೀಡಿದ ಕಾಂಗ್ರೆಸ್ ಹೈಕಮಾಂಡ್ ಗೆ ನಾನು ಧನ್ಯವಾದ ಹೇಳುತ್ತೇನೆ,” ಎಂದರು.

2006ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಕಾರ್ಯಕರ್ತರು, ಶಾಸಕರು, ಸಂಸದರು ತೋರಿದ ಪ್ರೀತಿ ಹಾಗೂ ಸಹಕಾರವನ್ನು ಸ್ಮರಿಸಿದ ಅವರು, “2013ರಿಂದ 2018ರವರೆಗೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದೆ. ಬಳಿಕ 2023ರಿಂದ ಇಲ್ಲಿವರೆಗೆ ಮತ್ತೆ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದೆ. ನನ್ನ ಜೊತೆ ಕೆಲಸ ಮಾಡಿದ ಎಲ್ಲರಿಗೂ ನಾನು ಕೃತಜ್ಞ,” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande