
ಬೆಂಗಳೂರು, 28 ಮೇ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಟಿ ನಡೆಸಿ ಭಾವುಕರಾಗಿ ತಮ್ಮ ರಾಜಕೀಯ ಪಯಣ, ಸಂವಿಧಾನದ ಮೇಲಿನ ನಂಬಿಕೆ ಹಾಗೂ ಸಾಮಾಜಿಕ ನ್ಯಾಯದ ಬದ್ಧತೆಯನ್ನು ವ್ಯಕ್ತಪಡಿಸಿದರು.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದ ಸಿದ್ದರಾಮಯ್ಯ, “ರಾಜ್ಯಪಾಲರು ಊರಿನಲ್ಲಿ ಇಲ್ಲ ಎಂದು ಕಚೇರಿಯಿಂದ ತಿಳಿಸಿದರು. ಹೀಗಾಗಿ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದೇನೆ. ಸಂವಿಧಾನ ಪ್ರಕಾರ ರಾಜೀನಾಮೆ ಅಂಗೀಕರಿಸಲಾಗುತ್ತದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.
“ನಾನು ಮೊದಲಿನಿಂದಲೂ ಹೈಕಮಾಂಡ್ ಯಾವಾಗ ಸೂಚನೆ ಕೊಡುತ್ತದೋ ಆಗ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿದ್ದೆ. ಅದರಂತೆ ಹೈಕಮಾಂಡ್ ಸೂಚನೆ ಬಂದ ತಕ್ಷಣ ರಾಜೀನಾಮೆ ನೀಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಮುಂದಿನ ಮುಖ್ಯಮಂತ್ರಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ ತೆಗೆದುಕೊಳ್ಳಲಿದೆ ಎಂದರು.
ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಅವರು, “ನಾನು ಹಳ್ಳಿಯಿಂದ ಬಂದವನು. ಶಾಸಕ, ಮುಖ್ಯಮಂತ್ರಿ ಆಗುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿರಲಿಲ್ಲ” ಎಂದು ಭಾವುಕರಾದರು.
“ರಾಜಕೀಯಕ್ಕೆ ಬಂದಾಗಿನಿಂದಲೂ ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಸಂವಿಧಾನವೇ ನಮ್ಮ ಧರ್ಮ. ಮತದಾರರೇ ನಮ್ಮ ಅಭಿಮಾನಿ ದೇವರು” ಎಂದು ಹೇಳಿದರು.
ಸಮಾಜದಲ್ಲಿ ಸಮಾನತೆಯ ಅಗತ್ಯವನ್ನು ಒತ್ತಿಹೇಳಿದ ಅವರು, “ಕುವೆಂಪು ಹೇಳಿದಂತೆ ಸಮಾಜ ಶಾಂತಿಯ ತೋಟವಾಗಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಅವಕಾಶದ ಕೊರತೆಯಿಂದಲೇ ಅಸಮಾನತೆ ಉಂಟಾಗಿದೆ” ಎಂದರು.
ತಮ್ಮ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, “2013ರಲ್ಲಿ ನೀಡಿದ್ದ 165 ಭರವಸೆಗಳಲ್ಲಿ 158ನ್ನು ಈಡೇರಿಸಿದ್ದೇವೆ. 2023ರಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ” ಎಂದು ಹೇಳಿದರು.
“ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡಿದ್ದವು. ಆದರೆ ಇಂದು ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ” ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
“ನಾನು ಯಾವತ್ತೂ ಅಧಿಕಾರ ಅಥವಾ ಹಣದ ಹಿಂದೆ ಹೋದವನಲ್ಲ. ಸುಮಾರು 50 ವರ್ಷದ ರಾಜಕೀಯ ಜೀವನ ನನ್ನದು. ನನ್ನ ಜೀವನ ತೆರೆದ ಪುಸ್ತಕ” ಎಂದು ಹೇಳಿದರು.
ಸಂವಿಧಾನದ ಮಹತ್ವವನ್ನು ಭಾವುಕರಾಗಿ ವಿವರಿಸಿದ ಅವರು, “ಸಂವಿಧಾನ ಇಲ್ಲದೆ ಹೋಗಿದ್ದರೆ ನಾನು ವಿದ್ಯಾವಂತನಾಗುತ್ತಿರಲಿಲ್ಲ. ಯಾವುದೇ ಹುದ್ದೆ ಅಲಂಕರಿಸಲು ಸಾಧ್ಯವಾಗುತ್ತಿರಲಿಲ್ಲ. ಕುರಿ ಮೇಯಿಸಿಕೊಂಡು ಇರುತ್ತಿದ್ದೆ. ನನ್ನ ತಂದೆ-ತಾಯಿ ಅವಿದ್ಯಾವಂತರು” ಎಂದು ಹೇಳಿದರು.
“ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಹೋರಾಡುತ್ತೇನೆ. ಕೊನೆಯ ಉಸಿರಿರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ” ಎಂದು ಘೋಷಿಸಿದರು.
ರಾಜ್ಯ ಸಭೆಗೆ ಹೋಗುವ ಅವಕಾಶ ಬಂದಿತ್ತು ಎಂದು ಬಹಿರಂಗಪಡಿಸಿದ ಅವರು, “ಆ ಅವಕಾಶವನ್ನು ವಿನಮ್ರವಾಗಿ ನಿರಾಕರಿಸಿದ್ದೇನೆ. ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುತ್ತೇನೆ. ಜನರು ಆಯ್ಕೆ ಮಾಡಿದವರೆಗೆ ಅವರ ಪರವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
ಕಾವೇರಿ ನಿವಾಸದಲ್ಲಿ ಭಾವುಕ ಉಪಾಹಾರ ಕೂಟ
ರಾಜೀನಾಮೆ ಘೋಷಣೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಉಪಹಾರ ಕೂಟ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಅಧಿಕಾರ ಹಂಚಿಕೆ ಚರ್ಚೆಗಳ ನಡುವೆಯೂ ನಾಯಕರು ಒಗ್ಗಟ್ಟಿನ ಸಂದೇಶ ರವಾನಿಸಲು ಪ್ರಯತ್ನಿಸಿದ ದೃಶ್ಯಗಳು ಗಮನ ಸೆಳೆದವು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಸಭೆಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಭಾಗವಹಿಸಿದ್ದರು.
ಇದೇ ವೇಳೆ ಸಿದ್ದರಾಮಯ್ಯ ಅವರ ರಾಜೀನಾಮೆ ಘೋಷಣೆಯಿಂದ ಭಾವುಕರಾದ ಸಚಿವ ಸಂತೋಷ್ ಲಾಡ್ ಅವರು ಮಾಧ್ಯಮಗಳೊಂದಿಗೆ ಮಾತನಾಡದೇ ಕಣ್ಣೀರಿಡುತ್ತಲೇ ಕಾರಿನಲ್ಲಿ ತೆರಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.