ನರೇಗಾದಲ್ಲಿ ಹಿರಿಯ ನಾಗರಿಕರಿಗೆ ಕೆಲಸ
ರಿ
ಫೋಟೋ


ಗದಗ, 28 ಮೇ (ಹಿ.ಸ.) :

ಆ್ಯಂಕರ್ : ವಯಸ್ಸು ಕೇವಲ ಅಂಕಿ ಮಾತ್ರ, ಮನಸ್ಸಿದ್ದರೆ ಯಾವುದೇ ಕೆಲಸ ಅಸಾಧ್ಯವಲ್ಲ ಎನ್ನುವುದಕ್ಕೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸ ಡಂಬಳ ಗ್ರಾಮದ ಹಿರಿಯ ನಾಗರಿಕರು ಜೀವಂತ ಸಾಕ್ಷಿಯಾಗಿದ್ದಾರೆ. 62 ವರ್ಷ ದಾಟಿದ ಬಳಿಕ ವಿಶ್ರಾಂತಿಯ ಬದುಕನ್ನು ಆಯ್ಕೆ ಮಾಡಿಕೊಳ್ಳುವ ವಯಸ್ಸಿನಲ್ಲಿ, ಇಲ್ಲಿನ 12ಕ್ಕೂ ಹೆಚ್ಚು ಹಿರಿಯ ನಾಗರಿಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕಾಮಗಾರಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಡಂಬಳ ಗ್ರಾಮದಲ್ಲಿ 2026-27ನೇ ಸಾಲಿನ ನರೇಗಾ ಸಮುದಾಯ ಬಾಂದಾರ ಹೂಳೆತ್ತುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಕಾಮಗಾರಿಗಳಲ್ಲಿ ಹಿರಿಯ ನಾಗರಿಕರ ಪಾಲ್ಗೊಳ್ಳುವಿಕೆ ವಿಶೇಷ ಗಮನ ಸೆಳೆದಿದೆ.

ಇಳಿವಯಸ್ಸಿನಲ್ಲೂ ದುಡಿಮೆಯ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಹಿರಿಯರು, “ದುಡಿಮೆಯೇ ದುಡ್ಡಿನ ತಾಯಿ” ಎಂಬ ಮಾತಿನ ಅರ್ಥವನ್ನು ತಮ್ಮ ಪರಿಶ್ರಮದ ಮೂಲಕ ಸಾಬೀತುಪಡಿಸಿದ್ದಾರೆ.

ಗ್ರಾಮದಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ 62 ರಿಂದ 77 ವರ್ಷದೊಳಗಿನ ಹಿರಿಯ ನಾಗರಿಕರು ಕೂಲಿಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂಟೆಲಪ್ಪ ತಳವಾರ (77), ಯಲ್ಲಪ್ಪ ಕವಲೂರು (68), ಮಹದೇವಪ್ಪ ತಳವಾರ (70), ನಿಂಗವ್ವ ತಳವಾರ (68), ಶಾರದಾ ಕವಲೂರು (64), ಕಮಲವ್ವ ಡೊಳ್ಳಿನ (63), ದೇವಕ್ಕ ತಳವಾರ (62), ಲಕ್ಷ್ಮವ್ವ ಪೂಜಾರ (62), ಹಾಲವ್ವ ಬೇವಿನಮರದ (65), ಸಂಗವ್ವ ಕಾತರಕಿ (64), ರೇಣಮ್ಮ ಪೂಜಾರ (64) ಹಾಗೂ ಯಮುನಾಬಿ ನದಾಫ (65) ಸೇರಿದಂತೆ ಹಲವು ಹಿರಿಯರು ಪ್ರತಿನಿತ್ಯ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ಈ ಹಿರಿಯರಲ್ಲಿ ಕೆಲವರು ಕಳೆದ ಹತ್ತು ವರ್ಷಗಳಿಂದಲೇ ನರೇಗಾ ಯೋಜನೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗುವ ಸಂದರ್ಭದಲ್ಲಿ ಇವರ ಬದುಕಿಗೆ ನರೇಗಾ ಯೋಜನೆಯೇ ಪ್ರಮುಖ ಆಧಾರವಾಗಿದೆ. ಕೂಲಿಕಾರ್ಮಿಕ ಕುಟುಂಬಗಳಿಂದ ಬಂದಿರುವ ಬಹುತೇಕ ಹಿರಿಯರಿಗೆ ಸ್ಥಿರ ಆದಾಯದ ಮೂಲವಿಲ್ಲ. ಕೆಲವರಿಗೆ ಅಲ್ಪ ಪ್ರಮಾಣದ ಕೃಷಿ ಭೂಮಿ ಇದ್ದರೂ, ಬಹುತೇಕರಿಗೆ ಕೃಷಿಭೂಮಿಯೇ ಇಲ್ಲ. ಹೀಗಾಗಿ ಬೇರೆವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುವುದೇ ಜೀವನೋಪಾಯವಾಗಿದೆ.

ಆದರೆ ಬೇಸಿಗೆಯಲ್ಲಿ ಕೃಷಿ ಕೆಲಸಗಳ ಕೊರತೆಯಿಂದ ಗ್ರಾಮೀಣ ಜನರು ಉದ್ಯೋಗ ಸಮಸ್ಯೆ ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ನರೇಗಾ ಯೋಜನೆ ಗ್ರಾಮೀಣ ಬಡ ಕುಟುಂಬಗಳಿಗೆ ಆಶಾಕಿರಣವಾಗಿದ್ದು, ಹಿರಿಯ ನಾಗರಿಕರ ಬದುಕಿಗೂ ನೆರವಾಗುತ್ತಿದೆ. ಯೋಜನೆಯಡಿ ಲಭ್ಯವಾಗುತ್ತಿರುವ ದಿನಗೂಲಿ ಮೊತ್ತವು ಇವರಿಗೆ ಜೀವನ ನಿರ್ವಹಣೆಗೆ ಮಹತ್ವದ ಆಧಾರವಾಗಿದೆ.

ಈ ಕುರಿತು ಮಾತನಾಡಿದ ಹಿರಿಯ ಕೂಲಿಕಾರ ಒಂಟೆಲಪ್ಪ ತಳವಾರ ಅವರು, “ನಮಗೆ ವಯಸ್ಸಾದರೂ ದುಡಿಯುವ ಆಸೆ ಕಡಿಮೆಯಾಗಿಲ್ಲ. ನರೇಗಾ ಯೋಜನೆಯಿಂದ ಸಿಗುತ್ತಿರುವ ಸುಮಾರು 370 ರೂಪಾಯಿ ಕೂಲಿ ನಮ್ಮ ಕುಟುಂಬದ ಹೊಟ್ಟೆಪಾಡಿಗೆ ನೆರವಾಗುತ್ತಿದೆ. ಕೆಲಸ ಇಲ್ಲದ ಸಮಯದಲ್ಲಿ ಈ ಯೋಜನೆಯೇ ನಮಗೆ ವರದಾನವಾಗಿದೆ,” ಎಂದು ಹೇಳಿದರು.

ನರೇಗಾ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗಿರುವ “ಅರ್ಧ ಕೆಲಸ – ಪೂರ್ಣ ಕೂಲಿ” ನಿಯಮವೂ ಇವರಿಗೆ ಅನುಕೂಲಕರವಾಗಿದೆ. ಇದರಿಂದ ಇಳಿವಯಸ್ಸಿನಲ್ಲೂ ಹೆಚ್ಚು ದೈಹಿಕ ಒತ್ತಡವಿಲ್ಲದೆ ಕೆಲಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ. ಸರ್ಕಾರದ ಈ ಮಾನವೀಯ ಕ್ರಮ ಗ್ರಾಮೀಣ ಭಾಗದ ಹಿರಿಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಹಿರಿಯ ನಾಗರಿಕರು, ವಿಶೇಷಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರನ್ನು ನರೇಗಾ ಯೋಜನೆಗೆ ಸೆಳೆಯಲು ಸರ್ಕಾರದಿಂದ ವಿಶೇಷ ಪ್ರಯತ್ನಗಳು ನಡೆಯುತ್ತಿವೆ. ಗ್ರಾಮಸಭೆಗಳು, ಜಾಗೃತಿ ಸಭೆಗಳು ಹಾಗೂ ಐಇಸಿ ಚಟುವಟಿಕೆಗಳ ಮೂಲಕ ಯೋಜನೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದರ ಫಲವಾಗಿ ಹೊಸ ಡಂಬಳ ಗ್ರಾಮದಲ್ಲಿ ಏಕಕಾಲಕ್ಕೆ ಇಷ್ಟು ಹೆಚ್ಚು ಹಿರಿಯ ನಾಗರಿಕರು ಕೆಲಸದಲ್ಲಿ ಪಾಲ್ಗೊಂಡಿರುವುದು ಯೋಜನೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದೆ.

ಈ ಕುರಿತು ಮಾಹಿತಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬೆಣ್ಣೆ ಅವರು, “ಸಭೆಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಐಇಸಿ ಚಟುವಟಿಕೆಗಳ ಮೂಲಕ ವಿಶೇಷಚೇತನರು, ಹಿರಿಯ ನಾಗರಿಕರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸಲು ಸೂಚನೆ ನೀಡಲಾಗಿತ್ತು.

ಅದರಂತೆ ಹೊಸ ಡಂಬಳ ಗ್ರಾಮದ ಕಾಮಗಾರಿಯಲ್ಲಿ 12ಕ್ಕೂ ಹೆಚ್ಚು ಹಿರಿಯ ನಾಗರಿಕರು ಒಂದೇ ವೇಳೆ ಭಾಗವಹಿಸಿರುವುದು ಗ್ರಾಮೀಣ ಅಭಿವೃದ್ಧಿ ಹಾಗೂ ಯೋಜನೆಯ ಮಹತ್ವವನ್ನು ತೋರಿಸುತ್ತದೆ,” ಎಂದು ತಿಳಿಸಿದರು.

ಒಟ್ಟಾರೆ, ವಯಸ್ಸಿನ ಅಡ್ಡಿಯನ್ನೇ ಮೀರಿ ದುಡಿಮೆಯಲ್ಲಿ ತೊಡಗಿಕೊಂಡಿರುವ ಹೊಸ ಡಂಬಳ ಗ್ರಾಮದ ಹಿರಿಯ ನಾಗರಿಕರು, ಆತ್ಮವಿಶ್ವಾಸ, ಪರಿಶ್ರಮ ಮತ್ತು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುತ್ತಿರುವುದರ ಜೊತೆಗೆ ಯುವ ಸಮುದಾಯಕ್ಕೂ ಪ್ರೇರಣೆಯಾಗಿದ್ದಾರೆ. ಗ್ರಾಮೀಣ ಬದುಕಿನ ಸವಾಲುಗಳ ಮಧ್ಯೆಯೂ ದುಡಿಮೆಯ ದಾರಿ ಹಿಡಿದಿರುವ ಈ ಹಿರಿಯರ ಕಥೆ, ನರೇಗಾ ಯೋಜನೆಯ ಸಾಮಾಜಿಕ ಮಹತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande