
ಗದಗ, 28 ಮೇ (ಹಿ.ಸ.) :
ಆ್ಯಂಕರ್ : ಖಾಸಗಿ ಶಾಲೆಗಳ ಹೆಚ್ಚುತ್ತಿರುವ ಪೈಪೋಟಿಯ ನಡುವೆಯೂ ಸರ್ಕಾರಿ ಶಾಲೆಗಳ ಅಸ್ತಿತ್ವ ಉಳಿಸಿ ದಾಖಲಾತಿ ಹೆಚ್ಚಿಸಲು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊಸ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿನೂತನ ಹೆಜ್ಜೆ ಇಟ್ಟಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕರ ಗಮನ ಸೆಳೆದಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಹೊಸದಾಗಿ ದಾಖಲಾಗುವ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ₹1000 ಠೇವಣಿ ಇಡುವ ಮಹತ್ವದ ಘೋಷಣೆಯನ್ನು ಶಾಲೆಯ ಶಿಕ್ಷಕ ವೃಂದ ಮಾಡಿದೆ. ಈ ವಿನೂತನ ಯೋಜನೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಮಾದರಿಯ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.
ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಈ ಯೋಜನೆಯಡಿ ಮಕ್ಕಳ ಹೆಸರಿನಲ್ಲಿ ಠೇವಣಿ ಇಡುವುದರಿಂದ ಮುಂದಿನ ದಿನಗಳಲ್ಲಿ 10ನೇ ತರಗತಿ ಹಾಗೂ ಪಿಯುಸಿ ಶಿಕ್ಷಣದ ಅವಧಿಯಲ್ಲಿ ನೆರವಾಗಲಿದೆ ಎಂಬ ವಿಶ್ವಾಸವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.
ಇದೊಂದೇ ಅಲ್ಲದೆ ಶಾಲೆಗೆ ಹೊಸದಾಗಿ ಸೇರುವ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್, ಟೈ-ಬೆಲ್ಟ್, ಶಾಲೆಯ ಹೆಸರುಳ್ಳ ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಸಹ ಉಚಿತವಾಗಿ ನೀಡಲು ಶಾಲೆ ಮುಂದಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಇದು ನೆರವಾಗಲಿದ್ದು, ಸರ್ಕಾರಿ ಶಾಲೆಗಳತ್ತ ಪೋಷಕರ ಆಸಕ್ತಿ ಹೆಚ್ಚುವ ನಿರೀಕ್ಷೆ ಮೂಡಿಸಿದೆ.
ಗ್ರಾಮೀಣ ಪ್ರದೇಶದ ಈ ಸರ್ಕಾರಿ ಶಾಲೆಯಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದ್ದು, ಟಿವಿ ಹಾಗೂ ಯೂಟ್ಯೂಬ್ ಆಧಾರಿತ ವಿಡಿಯೋ ಪಾಠಗಳ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಬೋಧನೆಯಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಮಕ್ಕಳು ಸುಲಭವಾಗಿ ಕಲಿಯುವಂತೆ ಮಾಡಲಾಗುತ್ತಿದೆ.
ಇದರ ಜೊತೆಗೆ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಎಲ್ಲ ತರಗತಿ ಕೊಠಡಿಗಳಲ್ಲೂ ಫ್ಯಾನ್ ಅಳವಡಿಕೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿರುವುದರಿಂದ ಮಕ್ಕಳಿಗೆ ಆಕರ್ಷಕ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣ ಉಂಟಾಗಿದೆ.
ಸರ್ಕಾರದಿಂದ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್, ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳು ಲಭ್ಯವಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿರುವುದು ಶಿಕ್ಷಣ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದಾಖಲಾತಿ ಹೆಚ್ಚಿಸಲು ಬೆಳ್ಳಟ್ಟಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸಮುದಾಯದ ಸಹಕಾರದೊಂದಿಗೆ ಕೈಗೊಂಡಿರುವ ಈ ಪ್ರಯತ್ನ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಗಿರೀಶ ಕೊಡಬಾಳ, “ಗ್ರಾಮದ ಸಮುದಾಯ ಹಾಗೂ ಶಿಕ್ಷಕರ ಸಹಕಾರದಿಂದ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ, ಶಾಲಾ ಬ್ಯಾಗ್, ಟೈ-ಬೆಲ್ಟ್, ಟೀ-ಶರ್ಟ್ ಹಾಗೂ ಮಗ್ಗಿ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ” ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಅವರು ಈ ಪ್ರಯತ್ನವನ್ನು ಶ್ಲಾಘಿಸಿ, “ಶಾಲೆಯಲ್ಲಿ ಹೊಸದಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ₹1000 ಠೇವಣಿ ಹಾಗೂ ಉಚಿತ ಶೈಕ್ಷಣಿಕ ಸಾಮಗ್ರಿ ನೀಡುತ್ತಿರುವುದು ಶಿಕ್ಷಣ ಮತ್ತು ದಾಖಲಾತಿ ಹೆಚ್ಚಿಸಲು ಮಾದರಿಯಾದ ಕಾರ್ಯಕ್ರಮವಾಗಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಶಿಕ್ಷಕರ ಇಚ್ಛಾಶಕ್ತಿ ಹಾಗೂ ಸಮುದಾಯದ ಸಹಕಾರವೇ ಪ್ರಮುಖ ಅಂಶ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಮತ್ತು ಗ್ರಾಮಸ್ಥರ ಸಹಭಾಗಿತ್ವದಿಂದ ಆರಂಭವಾಗಿರುವ ಈ ವಿನೂತನ ಯೋಜನೆ ಇತರ ಶಾಲೆಗಳಿಗೂ ಮಾದರಿಯಾಗುವ ಸಾಧ್ಯತೆ ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸ ಪುನಃ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP