
ತೆಹ್ರಾನ್/ವಾಷಿಂಗ್ಟನ್, 28 ಮೇ (ಹಿ.ಸ.):
ಆ್ಯಂಕರ್ : ಇರಾನ್ ಮತ್ತು ಅಮೆರಿಕಾ ನಡುವಿನ ಶಾಂತಿ ಒಪ್ಪಂದದ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಹೋರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ಮೇ 27 ಮತ್ತು 28ರ ಮಧ್ಯರಾತ್ರಿ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ನೌಕಾಪಡೆ ಅಮೆರಿಕದ ಒಂದು ತೈಲ ಟ್ಯಾಂಕರ್ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದೆಯೆಂದು ವರದಿಯಾಗಿದೆ.
ಆ ಹಡಗು ರಡಾರ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಹೋರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುತ್ತಿತ್ತು ಎಂದು ಇರಾನ್ ಆರೋಪಿಸಿದೆ.
ಇದಕ್ಕೆ ಪ್ರತಿಯಾಗಿ ಅಮೆರಿಕಾ ದಕ್ಷಿಣ ಇರಾನ್ನ ಪ್ರಮುಖ ಬಂದರು ನಗರವಾದ ಬಂದರ್ ಅಬ್ಬಾಸ್ ಸುತ್ತಮುತ್ತ ಪ್ರತಿದಾಳಿ ನಡೆಸಿದೆ. ಈ ಪ್ರದೇಶ ಹೋರ್ಮುಜ್ ಜಲಸಂಧಿಯ ಸಮೀಪದಲ್ಲಿರುವುದರಿಂದ ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಾಧ್ಯಮಗಳಾದ ಅಲ್ ಜಝೀರಾ, ತಸ್ನೀಮ್, ಎಬಿಸಿ ನ್ಯೂಸ್ ಹಾಗೂ ಸಿಬಿಎಸ್ ನ್ಯೂಸ್ ವರದಿಗಳ ಪ್ರಕಾರ, ಬಂದರ್ ಅಬ್ಬಾಸ್ ಸಮೀಪ ಭಾರೀ ಸ್ಫೋಟಗಳು ಸಂಭವಿಸಿವೆ. ಆದರೆ ಈ ಘಟನೆ ಕುರಿತು ಇರಾನ್ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕದ ಅಧಿಕಾರಿಗಳ ಪ್ರಕಾರ, ಈ ದಾಳಿ ಆತ್ಮರಕ್ಷಣೆಗಾಗಿ ನಡೆಸಲಾಯಿತು. ನಾಲ್ಕು ಇರಾನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಐದನೇ ಡ್ರೋನ್ ಉಡಾವಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದ ಭೂಗತ ನಿಯಂತ್ರಣ ಕೇಂದ್ರವನ್ನೂ ಗುರಿಯಾಗಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಇದಕ್ಕೂ ಎರಡು ದಿನಗಳ ಹಿಂದೆಯೇ ದಕ್ಷಿಣ ಇರಾನ್ನಲ್ಲಿ ಕ್ಷಿಪಣಿ ಉಡಾವಣೆ ಕೇಂದ್ರಗಳು ಹಾಗೂ ಇರಾನ್ ನೌಕಾಪಡೆಯ ಕೆಲವು ದೋಣಿಗಳ ಮೇಲೆ ಅಮೆರಿಕಾ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ ಹೋರ್ಮುಜ್ ಪ್ರದೇಶ ಸಂಪೂರ್ಣ ಯುದ್ಧಭೂಮಿಯಂತಾಗಿದೆ.
ಬಂದರ್ ಅಬ್ಬಾಸ್ ಬಂದರು ಪ್ರದೇಶದ ಸ್ಫೋಟಗಳಿಂದ ಸ್ಥಳೀಯರಲ್ಲಿ ಭೀತಿ ಆವರಿಸಿದೆ. ಇತ್ತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ಗೆ ಮರಳಿದ ಬಳಿಕ ತುರ್ತು ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಇರಾನ್ನೊಂದಿಗೆ ನಡೆಯುತ್ತಿರುವ ಮಾತುಕತೆ ಪ್ರಮುಖ ಚರ್ಚೆಯ ವಿಷಯವಾಗಿತ್ತು.
ಈ ಸಂಘರ್ಷವನ್ನು ಅಂತ್ಯಗೊಳಿಸಲು ಟ್ರಂಪ್ ಮೇಲೆ ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಪಕ್ಷಗಳ ಎರಡೂ ಕಡೆಯಿಂದ ಒತ್ತಡ ಹೆಚ್ಚುತ್ತಿದೆ. “ಅಮೆರಿಕದ ಹಿತಾಸಕ್ತಿಯನ್ನು ಕಾಪಾಡುವ ಉತ್ತಮ ಒಪ್ಪಂದವೇ ಬೇಕು. ಸಮರ್ಪಕವಲ್ಲದ ಒಪ್ಪಂದವನ್ನು ನಾವು ಒಪ್ಪುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.
ಗಮನಾರ್ಹವಾಗಿ, ಫೆಬ್ರವರಿ 28ರಂದು ಟ್ರಂಪ್ ಇರಾನ್ ವಿರುದ್ಧ ಭಾರೀ ಸೈನಿಕ ಕಾರ್ಯಾಚರಣೆ ಘೋಷಿಸಿದ್ದರು. ಬಳಿಕ ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನ್ನ ಸೈನಿಕ, ಆಡಳಿತಾತ್ಮಕ ಮತ್ತು ಮೂಲಸೌಕರ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದವು. ನಂತರ ಎರಡು ವಾರಗಳ ಕಾಲ ತಾತ್ಕಾಲಿಕ ಯುದ್ಧ ವಿರಾಮ ಜಾರಿಗೊಂಡಿತ್ತು.
ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ನಡೆದ ಪ್ರಾಥಮಿಕ ಮಾತುಕತೆ ಶಾಂತಿ ಒಪ್ಪಂದಕ್ಕೆ ತಲುಪಲು ವಿಫಲವಾಗಿತ್ತು. ಬಳಿಕ ಟ್ರಂಪ್ ಯುದ್ಧ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವುದಾಗಿ ಹಾಗೂ ಮಾತುಕತೆ ಪೂರ್ಣಗೊಳ್ಳುವವರೆಗೆ ಅಮೆರಿಕದ ನಿರ್ಬಂಧಗಳು ಮುಂದುವರಿಯಲಿವೆ ಎಂದು ಘೋಷಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.