
ಗದಗ, 28 ಮೇ (ಹಿ.ಸ.) :
ಆ್ಯಂಕರ್ : ಕುಮಾರವ್ಯಾಸ ಭಾರತದಂತಹ ಅಮರ ಮಹಾಕಾವ್ಯಗಳ ಪ್ರಕಾರ, ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಗಮಕ ಕಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಈ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಭಿಪ್ರಾಯಪಟ್ಟರು.
ಗದಗ ನಗರದ ತೋಂಟದ ಸಿದ್ದಲಿಂಗಶ್ರೀಗಳ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ಜಿಲ್ಲಾ ಘಟಕ ಗದಗ, ಕುಮಾರವ್ಯಾಸ ಪ್ರತಿಷ್ಠಾನ ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ “ಕುಮಾರವ್ಯಾಸ ಭಾರತದ ಗಮಕ ವಾಚನ ಮತ್ತು ವ್ಯಾಖ್ಯಾನ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕುಮಾರವ್ಯಾಸ ಭಾರತಕ್ಕೆ ವಿಶಿಷ್ಟ ಸ್ಥಾನಮಾನವಿದ್ದು, ಗದುಗಿನ ನೆಲದಲ್ಲಿ ಹುಟ್ಟಿ ಬೆಳೆದ ಈ ಕಾವ್ಯ ಕನ್ನಡ ಸಂಸ್ಕೃತಿಯ ಅಮೂಲ್ಯ ಆಸ್ತಿ ಎಂದು ಅವರು ಹೇಳಿದರು. ಮಹಾಕವಿ ಕುವೆಂಪು ಹೇಳಿರುವ “ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು” ಎಂಬ ಮಾತುಗಳು ಕುಮಾರವ್ಯಾಸ ಭಾರತದ ಮಹತ್ವವನ್ನು ಸಾರುತ್ತವೆ ಎಂದು ಉಲ್ಲೇಖಿಸಿದರು.
ಮಹಾಭಾರತದ ಅನೇಕ ಪ್ರಸಂಗಗಳನ್ನು ರೂಪಕಗಳು, ಉಪಮೆಗಳು ಮತ್ತು ಆಳವಾದ ತಾತ್ವಿಕ ಅಂಶಗಳ ಮೂಲಕ ಕುಮಾರವ್ಯಾಸ ಅತ್ಯಂತ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾನೆ. ಇಂತಹ ಶ್ರೇಷ್ಠ ಕಾವ್ಯವನ್ನು ಗಮಕ ಕಲಾವಿದರು ಸಂಗೀತಮಯವಾಗಿ ಹಾಡಿ ಅದರ ಅರ್ಥ, ಆಶಯ ಹಾಗೂ ತತ್ವಗಳನ್ನು ವ್ಯಾಖ್ಯಾನಿಸುವ ಮೂಲಕ ಸಹೃದಯರಲ್ಲಿ ಅನಿರ್ವಚನೀಯ ಆನಂದ ಮೂಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯು ಕುಮಾರವ್ಯಾಸರ ನೆಲವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಇನ್ನಷ್ಟು ಗಮಕ ಕಲಾವಿದರು ರೂಪುಗೊಳ್ಳಬೇಕು. ಅದಕ್ಕಾಗಿ ಸಂಗೀತ ಪಾಠಶಾಲೆಗಳು, ಸಾಹಿತ್ಯ ಸಂಸ್ಥೆಗಳು ಹಾಗೂ ಕುಮಾರವ್ಯಾಸ ಪ್ರತಿಷ್ಠಾನಗಳು ಮುಂದಾಳತ್ವ ವಹಿಸಬೇಕು. ಯುವಜನರಲ್ಲಿ ಗಮಕ ಕಲೆಯ ಬಗ್ಗೆ ಆಸಕ್ತಿ ಮೂಡಿಸಿ, ನಿರಂತರ ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಅಗತ್ಯವಿದೆ ಎಂದು ಹೇಳಿದರು.
“ಗಮಕ ಕಲೆ ಉಳಿದರೆ ಮಾತ್ರ ಕುಮಾರವ್ಯಾಸ ಭಾರತದಂತಹ ಮಹಾಕಾವ್ಯಗಳ ಸೊಗಡು ಮುಂದಿನ ಪೀಳಿಗೆಗೂ ತಲುಪುತ್ತದೆ” ಎಂದು ಅವರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ದತ್ತಪ್ರಸನ್ನ ಪಾಟೀಲ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಕವಿ ಕುಮಾರವ್ಯಾಸರನ್ನು ವಿದ್ಯಾರ್ಥಿ ಸಮುದಾಯಕ್ಕೆ ಪರಿಚಯಿಸುವ ಉದ್ದೇಶದಿಂದ ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳಿಗೆ ಹಳಗನ್ನಡ ಸಾಹಿತ್ಯದ ಅರಿವು ಕಡಿಮೆಯಾಗುತ್ತಿರುವ ಹಿನ್ನೆಲೆ, ಇಂತಹ ಗಮಕ ವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮಗಳು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗಲಿವೆ. ಕುಮಾರವ್ಯಾಸ ಭಾರತ ಸೇರಿದಂತೆ ಹಳಗನ್ನಡ ಕಾವ್ಯಗಳ ಅಧ್ಯಯನಕ್ಕೆ ಯುವಜನರನ್ನು ಪ್ರೇರೇಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕುಮಾರವ್ಯಾಸ ಭಾರತದ ಉದ್ಯೋಗಪರ್ವದಲ್ಲಿನ “ವಿಶ್ವರೂಪ ದರ್ಶನ” ಪ್ರಸಂಗವನ್ನು ಬೆಂಗಳೂರಿನ ಸಂಧ್ಯಾ ರಮೇಶ್ ಹಾಗೂ ಮೀನಾಕ್ಷಿ ಶ್ರೀಪಾದ ಅವರು ಗಮಕ ವಾಚನ ಮತ್ತು ಮನಮುಟ್ಟುವ ವ್ಯಾಖ್ಯಾನದ ಮೂಲಕ ಅತ್ಯಂತ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ಅವರ ಗಾಯನ, ಭಾವಪೂರ್ಣ ನಿರೂಪಣೆ ಮತ್ತು ಸಾಹಿತ್ಯದ ಆಳವಾದ ವಿವರಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಗುರುಮೂರ್ತಿ ದೇಶಪಾಂಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಿಡ್ನಂದಿ ರಾಹುಲ ಕಾರ್ಯಕ್ರಮ ನಿರೂಪಿಸಿದರು.
ಡಿ.ಎಸ್. ಬಾಪುರಿ ಸ್ವಾಗತಿಸಿದರು. ಸುಮನ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ಅಂದಾನಪ್ಪ ವಿಭೂತಿ, ವಿ.ಎಸ್. ದಲಾಲಿ, ಎಸ್.ಪಿ. ಹೊಂಬಳ, ರವೀಂದ್ರ ಜೋಶಿ, ಈಶ್ವರಪ್ಪ ಕುಬಸದ, ರಾಜೇಂದ್ರ ಕುಲಕರ್ಣಿ, ಜೆ.ಎ. ಪಾಟೀಲ, ಯಲ್ಲಪ್ಪ ಹಂದ್ರಾಳ, ಬೂದೇಶ ಮಜ್ಜಿಗುಡ್ಡ, ಮಲ್ಲಿಕಾರ್ಜುನ ಬಾರಕೇರ, ರತ್ನಕ್ಕ ಪಾಟೀಲ, ಶಾಂತಾಬಾಯಿ ಕುಲಕರ್ಣಿ, ಎನ್.ವಿ. ಪುರಾಣಿಕ, ಪ್ರಶಾಂತ ಪಾಟೀಲ, ಷಡಕ್ಷರಿ ಮೆಣಸಿನಕಾಯಿ, ದಯಾನಂದ ಮುಂಡರಗಿ, ದತ್ತಣ್ಣ ಜೋಶಿ, ಎಂ.ಎಫ್. ಡೋಣಿ, ಗುರುಪಾದ ಕಟ್ಟಿಮನಿ, ಅರವಿಂದ ಹುಯಿಲಗೋಳಕರ, ಚೆನ್ನಾರೆಡ್ಡಿ ಗೂಳರಡ್ಡಿ, ಗಜಾನನ ವೆರ್ಣೇಕರ, ಎಸ್.ಕೆ. ತೆಂಬದಮನಿ, ಎಸ್.ಎಸ್. ಹುನಗುಂದ, ಅಜಯ ಬಳಗಾನೂರ, ಶಶಿಕಾಂತ ಕೊರ್ಲಹಳ್ಳಿ, ಹೇಮಂತ ಕುಲಕರ್ಣಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು, ಗಮಕಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP