
ನವದೆಹಲಿ, 26 ಮೇ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾ ಉದ್ವಿಗ್ನತೆ ಹಾಗೂ ದೇಶದ ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ‘3ಎಫ್’ ಹೇಳಿಕೆಗೆ ಕಾಂಗ್ರೆಸ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡವಿದೆ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿರುವಾಗ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಗಳವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿದ ಜೈರಾಮ್ ರಮೇಶ್, ಹಣಕಾಸು ಸಚಿವೆ ‘3ಎಫ್’ ಅಂದರೆ ಫ್ಯುಯೆಲ್, ಫರ್ಟಿಲೈಸರ್ಸ್ ಮತ್ತು ಫಾರೆಕ್ಸ್ ಬಗ್ಗೆ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಅವರು ಅತ್ಯಂತ ಪ್ರಮುಖವಾದ ನಾಲ್ಕನೇ ‘ಎಫ್’ ಅನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ಖಾಸಗಿ ಹೂಡಿಕೆ ಪ್ರಮಾಣ ಕಳೆದ ಕೆಲವು ವರ್ಷಗಳಿಂದ ನಿರಂತರ ಕುಸಿತ ಕಾಣುತ್ತಿದೆ. ಒಟ್ಟು ವಿದೇಶಿ ನೇರ ಹೂಡಿಕೆ (ಎಫ್ಡಿಐ) ಹರಿವು ಕೂಡ ಕಡಿಮೆಯಾಗಿದ್ದು, ದೇಶೀಯ ಒಟ್ಟು ಉತ್ಪನ್ನದ (ಜಿಡಿಪಿ) ಶೇಕಡಾವಾರು ಅಳತೆಯಲ್ಲಿ ಖಾಸಗಿ ಕಾರ್ಪೊರೇಟ್ ಹೂಡಿಕೆ 2014ರ ಮೊದಲು ಇದ್ದ ಗರಿಷ್ಠ ಮಟ್ಟದ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಭಾರತೀಯ ಉದ್ಯಮಗಳು ಈಗ ವಿದೇಶಗಳಲ್ಲಿ ಹೆಚ್ಚು ಸ್ಥಿರ ಮತ್ತು ಲಾಭದಾಯಕ ಅವಕಾಶಗಳನ್ನು ಹುಡುಕುತ್ತಿವೆ. ಜೊತೆಗೆ ಹಲವು ಭಾರತೀಯ ಕಾರ್ಪೊರೇಟ್ ಉದ್ಯಮಿಗಳು ವಿದೇಶಗಳಲ್ಲಿ ನೆಲೆಸುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದರು. ಹೂಡಿಕೆ ಎನ್ನುವುದು ಕೇವಲ ಆರ್ಥಿಕ ನಿರ್ಧಾರವಲ್ಲ, ಅದು ಮನೋವೈಜ್ಞಾನಿಕ ಅಂಶಗಳ ಮೇಲೂ ಅವಲಂಬಿತವಾಗಿದೆ. ದೇಶದಲ್ಲಿ ಗ್ರಾಹಕ ಬೇಡಿಕೆಯ ಏರಿಕೆ ಕಾಣಿಸದಿರುವುದರಿಂದ ಕಂಪನಿಗಳು ಹೊಸ ಹೂಡಿಕೆ ಮಾಡಲು ಹಿಂಜರಿಯುತ್ತಿವೆ ಎಂದು ಅವರು ಹೇಳಿದರು.
ಉಲ್ಲೇಖನೀಯವಾಗಿ, ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ)ಯ 37ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಫ್ಯುಯೆಲ್, ಫರ್ಟಿಲೈಸರ್ಸ್ ಮತ್ತು ಫಾರೆಕ್ಸ್ ಎಂಬ ‘3ಎಫ್’ ಅಂಶಗಳ ಕಡೆ ವಿಶೇಷ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.