
ನವದೆಹಲಿ, 21 ಮೇ (ಹಿ.ಸ.) :
ಆ್ಯಂಕರ್ : ಟಿಬಿ ಮುಕ್ತ ಭಾರತ ಗುರಿಯನ್ನು ಸಾಧಿಸಲು ದೇಶದಲ್ಲಿ ವಿಶ್ವದ ಅತಿದೊಡ್ಡ ತಪಾಸಣಾ ಮತ್ತು ಶೀಘ್ರ ಪತ್ತೆ ಅಭಿಯಾನ ನಡೆಯುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಭೆಯ 79ನೇ ಅಧಿವೇಶನದ ಅಂಗವಾಗಿ ನಡೆದ “ಫೆಫ್ಸುಗಳ ಆರೋಗ್ಯ ತಪಾಸಣೆ: ಸಚಿವರ ದೃಷ್ಟಿಕೋನ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಯೋಚಿತ ತಪಾಸಣೆ, ಶೀಘ್ರ ರೋಗನಿರ್ಣಯ ಮತ್ತು ಸಮಾನ ಆರೋಗ್ಯ ಸೇವೆಗಳ ಲಭ್ಯತೆ ಬಲಿಷ್ಠ ಹಾಗೂ ಜನಕೇಂದ್ರಿತ ಆರೋಗ್ಯ ವ್ಯವಸ್ಥೆಯ ಮೂಲಾಧಾರವಾಗಿದೆ ಎಂದು ಹೇಳಿದರು.
ಫೆಫ್ಸುಗಳ ತಪಾಸಣೆ ಎಂದರೆ ಕೇವಲ ತಂತ್ರಜ್ಞಾನ ಅಥವಾ ಸಾಧನಗಳ ವಿಷಯವಲ್ಲ; ಅದು ಜೀವ ಉಳಿಸುವುದು, ನೋವು ಕಡಿಮೆ ಮಾಡುವುದು ಮತ್ತು ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯವಾಗಿದೆ ಎಂದು ನಡ್ಡಾ ಅಭಿಪ್ರಾಯಪಟ್ಟರು.
ಸ್ಟಾಪ್ ಟಿಬಿ ಪಾರ್ಟ್ನರ್ಶಿಪ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತ, ಜಪಾನ್, ಫಿಲಿಪೈನ್ಸ್ ಹಾಗೂ ಜಾಂಬಿಯಾ ಸಹ ಆಯೋಜಕರಾಗಿದ್ದರು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಮತ್ತು “ಟಿಬಿ ಮುಕ್ತ ಭಾರತ” ದೃಷ್ಟಿಕೋನದಡಿ ಭಾರತವು ವಿಶ್ವದ ಅತಿದೊಡ್ಡ ತಪಾಸಣೆ ಹಾಗೂ ಶೀಘ್ರ ಪತ್ತೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ನಡ್ಡಾ ಹೇಳಿದರು.
ಮನೆ ಮನೆಗೆ ತೆರಳಿ ತಪಾಸಣೆ, ಮೊಬೈಲ್ ತಪಾಸಣಾ ತಂಡಗಳು, ಸಮುದಾಯ ಆಧಾರಿತ ಅಭಿಯಾನಗಳು ಹಾಗೂ ಹೆಚ್ಚಿನ ಅಪಾಯವಿರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಧುನಿಕ ತಪಾಸಣಾ ತಂತ್ರಜ್ಞಾನಗಳ ಬಳಕೆಯನ್ನು ದೇಶಾದ್ಯಂತ ವ್ಯಾಪಕವಾಗಿ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಮಾಲಿಕ್ಯುಲರ್ ಪರೀಕ್ಷಾ ವೇದಿಕೆಗಳು, ಡಿಜಿಟಲ್ ಛಾತಿ ಎಕ್ಸ್ರೇ ಸೇವೆಗಳು, ಕೃತಕ ಬುದ್ಧಿಮತ್ತೆ ಆಧಾರಿತ ವಿಶ್ಲೇಷಣಾ ಸಾಧನಗಳು, ಕೈಗೆ ಹಿಡಿಯಬಹುದಾದ ತಪಾಸಣಾ ಉಪಕರಣಗಳು ಹಾಗೂ ವಿಕೇಂದ್ರೀಕೃತ ತಪಾಸಣಾ ವ್ಯವಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ವಿವರಿಸಿದರು.
ವಿಶೇಷವಾಗಿ ದೂರದ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ರೋಗನಿರ್ಣಯದ ವಿಳಂಬವನ್ನು ಕಡಿಮೆ ಮಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಕೇವಲ ರೋಗ ಪತ್ತೆ ಮಾಡಿದರೆ ಸಾಕಾಗುವುದಿಲ್ಲ; ಪೌಷ್ಟಿಕ ಆಹಾರ ನೆರವು, ಚಿಕಿತ್ಸೆಯ ನಿಯಮಿತ ಅನುಸರಣೆ, ಸಾಮಾಜಿಕ ಭದ್ರತೆ ಹಾಗೂ ಸಮುದಾಯದ ಸಹಕಾರವೂ ಅತಿ ಮುಖ್ಯ ಎಂದು ನಡ್ಡಾ ತಿಳಿಸಿದರು.
“ಟಿಬಿ ಮುಕ್ತ ಭಾರತ” ಅಭಿಯಾನದ ಮೂಲಕ ನಾಗರಿಕರು, ಸಂಸ್ಥೆಗಳು, ಕೈಗಾರಿಕಾ ವಲಯ ಮತ್ತು ಸಮುದಾಯಗಳನ್ನು ಟಿಬಿ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ನೆರವಾಗಲು ಸಂಪರ್ಕಿಸಲಾಗಿದೆ ಎಂದು ಹೇಳಿದರು.
“ಟಿಬಿ ಮುಕ್ತ ಭಾರತ” ಆಪ್ನಲ್ಲಿ “ಖುಷಿ” ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಬಹುಭಾಷಾ ಚಾಟ್ಬಾಟ್ ಅಳವಡಿಸಲಾಗಿದ್ದು, ಲಕ್ಷಣಗಳು, ಹಕ್ಕುಗಳು ಮತ್ತು ಸಮೀಪದ ತಪಾಸಣಾ ಕೇಂದ್ರಗಳ ಕುರಿತು ತಕ್ಷಣದ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.
ಫೆಫ್ಸುಗಳ ತಪಾಸಣೆ ಮತ್ತು ಟಿಬಿ ನಿರ್ಮೂಲನೆಯಂತಹ ಸವಾಲುಗಳನ್ನು ಯಾವುದೇ ದೇಶ ಒಂಟಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದು ನಡ್ಡಾ ಅಭಿಪ್ರಾಯಪಟ್ಟರು. ಜಾಗತಿಕ ಸಹಕಾರದ ಮೂಲಕ ಮಾತ್ರ ಈ ಗುರಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಸಾರ್ವತ್ರಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯ ಭಾಗವಾಗಿ ಫೆಫ್ಸುಗಳ ತಪಾಸಣೆಗೆ ಆದ್ಯತೆ ನೀಡುವುದು, ಕಡಿಮೆ ವೆಚ್ಚದ ತಪಾಸಣಾ ತಂತ್ರಜ್ಞಾನಗಳ ಲಭ್ಯತೆ ಹೆಚ್ಚಿಸುವುದು, ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು, ನವೀನತೆ ಮತ್ತು ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು ಹಾಗೂ ದೀರ್ಘಕಾಲಿಕ ಹಣಕಾಸು ವ್ಯವಸ್ಥೆ ರೂಪಿಸುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.