
ನವದೆಹಲಿ, 21 ಮೇ (ಹಿ.ಸ.) :
ಆ್ಯಂಕರ್ : ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪರಿವರ್ತನೆ ತರಬಲ್ಲ ಸಾಮರ್ಥ್ಯ ಹೊಂದಿದೆ. ಆದರೆ ಅದರ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕಾದರೆ ಕಠಿಣ ನಿಯಂತ್ರಣ, ವೈಜ್ಞಾನಿಕ ಸಂಶೋಧನೆ, ನೈತಿಕ ಮೇಲ್ವಿಚಾರಣೆ ಮತ್ತು ಸಮಾನತೆಯ ಬದ್ಧತೆ ಅಗತ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್ ಪ್ರಕಾಶ್ ನಡ್ಡಾ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಭೆಯ 79ನೇ ಅಧಿವೇಶನದ ಅಂಗವಾಗಿ ನಡೆದ “ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ: ಕಾನೂನು, ನೈತಿಕ ಮೇಲ್ವಿಚಾರಣೆ, ಸಂಶೋಧನೆ ಮತ್ತು ಸಮಾನತೆ” ವಿಷಯದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತವು ಸುರಕ್ಷಿತ, ಪಾರದರ್ಶಕ ಹಾಗೂ ಜನಕೇಂದ್ರಿತ ಆರೋಗ್ಯ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ರೂಪಿಸುವತ್ತ ದೃಢ ಹೆಜ್ಜೆ ಇಡುತ್ತಿದೆ ಎಂದು ನಡ್ಡಾ ಹೇಳಿದರು.
2015ರಲ್ಲಿ ಆರಂಭವಾದ ಡಿಜಿಟಲ್ ಇಂಡಿಯಾ ಯೋಜನೆ ಭಾರತವನ್ನು ಭವಿಷ್ಯದ ತಂತ್ರಜ್ಞಾನಗಳಿಗೆ, ವಿಶೇಷವಾಗಿ ಕೃತಕ ಬುದ್ಧಿಮತ್ತೆಗೆ ಸಜ್ಜುಗೊಳಿಸಿದೆ ಎಂದು ಅವರು ತಿಳಿಸಿದರು. 2017ರ ರಾಷ್ಟ್ರೀಯ ಆರೋಗ್ಯ ನೀತಿಯಲ್ಲಿ ಸಮಗ್ರ ಮತ್ತು ಸಮಾವೇಶಿತ ಡಿಜಿಟಲ್ ಆರೋಗ್ಯ ವ್ಯವಸ್ಥೆಯ ಪರಿಕಲ್ಪನೆ ರೂಪಿಸಲಾಗಿದ್ದು, 2021ರಲ್ಲಿ ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಮೂಲಕ ಅದನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಹೇಳಿದರು.
ಫೆಬ್ರುವರಿ 2026ರಲ್ಲಿ ಆರಂಭಿಸಲಾದ “ಭಾರತಕ್ಕಾಗಿ ಆರೋಗ್ಯ ಕ್ಷೇತ್ರದ ಕೃತಕ ಬುದ್ಧಿಮತ್ತೆ ತಂತ್ರಯೋಜನೆ” ಕುರಿತು ಉಲ್ಲೇಖಿಸಿದ ನಡ್ಡಾ, ಇದು ಗ್ಲೋಬಲ್ ಸೌತ್ ರಾಷ್ಟ್ರಗಳಿಂದ ಹೊರಬಂದ ಮೊದಲ ಸಮಗ್ರ ಕಾರ್ಯತಂತ್ರವಾಗಿದ್ದು, ನೈತಿಕತೆ, ಪಾರದರ್ಶಕತೆ ಮತ್ತು ಜನಕೇಂದ್ರಿತ ದೃಷ್ಟಿಕೋನದೊಂದಿಗೆ ಭಾರತದ ಆರೋಗ್ಯ ವ್ಯವಸ್ಥೆಗೆ ದಿಕ್ಕು ತೋರಿಸುತ್ತದೆ ಎಂದು ಹೇಳಿದರು.
ಭಾರತವು “ಆರೋಗ್ಯಕ್ಕಾಗಿ ಮುಕ್ತ ದತ್ತಾಂಶ ಮಾನದಂಡ ವೇದಿಕೆ”ಯನ್ನೂ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳು ನೈಜ ದತ್ತಾಂಶದ ಆಧಾರದ ಮೇಲೆ ಸುರಕ್ಷಿತ ಹಾಗೂ ಸಮಾನ ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯ ಸವಾಲುಗಳು ಮತ್ತು ಅವಕಾಶಗಳನ್ನು ಯಾವುದೇ ದೇಶ ಒಂಟಿಯಾಗಿ ಎದುರಿಸಲು ಸಾಧ್ಯವಿಲ್ಲ. ವಿಶ್ವದ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸಿ ವಿಶ್ವಾಸಾರ್ಹ ಹಾಗೂ ಪರಸ್ಪರ ಹೊಂದಾಣಿಕೆಯ ಆರೋಗ್ಯ ದತ್ತಾಂಶ ವ್ಯವಸ್ಥೆ ನಿರ್ಮಿಸಲು ಭಾರತ ಬದ್ಧವಾಗಿದೆ ಎಂದು ನಡ್ಡಾ ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ಕೇವಲ ತಂತ್ರಾಂಶಗಳು ನಿರ್ಧರಿಸುವುದಿಲ್ಲ; ಸರ್ಕಾರಗಳು, ಸಂಸ್ಥೆಗಳು ಮತ್ತು ಸಮಾಜಗಳ ಸಮೂಹ ನಿರ್ಧಾರಗಳು ಅದನ್ನು ರೂಪಿಸಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತ ಕೇವಲ ಕೃತಕ ಬುದ್ಧಿಮತ್ತೆಯಲ್ಲ, “ಸರ್ವ ಸಮಾವೇಶಿತ ಬುದ್ಧಿಮತ್ತೆ”ಯಲ್ಲಿ ನಂಬಿಕೆ ಇಟ್ಟುಕೊಂಡಿದೆ ಎಂದು ಹೇಳಿದ ನಡ್ಡಾ, ಜಾಗತಿಕ ಸಮುದಾಯವು ಕೃತಕ ಬುದ್ಧಿಮತ್ತೆಯನ್ನು ವಿಶ್ವ ಕಲ್ಯಾಣದ ಶಕ್ತಿಯನ್ನಾಗಿ ರೂಪಿಸಬೇಕು ಎಂದು ಕರೆ ನೀಡಿದರು।
ಹಿಂದೂಸ್ತಾನ್ ಸಮಾಚಾರ್ / Rakesh.M.B.