
ಗದಗ, 21 ಮೇ (ಹಿ.ಸ.) :
ಆ್ಯಂಕರ್ : ಇತ್ತೀಚಿನ ಮಳೆ ಹಾಗೂ ಬಿರುಗಾಳಿಯಿಂದ ತೀವ್ರ ಹಾನಿಗೊಳಗಾದ ಗದಗ ನಗರದ ಗಂಗಿಮಡಿ ಪ್ರದೇಶಕ್ಕೆ ಜೆಡಿಎಸ್ ಪಕ್ಷದ ನಿಯೋಗ ಗುರುವಾರ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿತು.
ಈ ವೇಳೆ ಸಂತ್ರಸ್ತರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಾ ಕಣ್ಣೀರು ಹಾಕಿದ ಘಟನೆ ಮನಕಲಕುವಂತಿತ್ತು. ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ನೇತೃತ್ವದ ನಿಯೋಗ ಗಂಗಿಮಡಿ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಹಾನಿಯ ಪ್ರಮಾಣವನ್ನು ವೀಕ್ಷಿಸಿತು.
ಬಿರುಗಾಳಿಯ ಅಬ್ಬರಕ್ಕೆ ಮನೆಗಳ ಮೇಲ್ಛಾವಣಿ ಹಾನಿಯಾಗಿರುವುದು, ಮನೆಗಳಲ್ಲಿ ನೀರು ನುಗ್ಗಿರುವುದು ಹಾಗೂ ದಿನನಿತ್ಯದ ಬದುಕು ಅಸ್ತವ್ಯಸ್ತಗೊಂಡಿರುವ ಕುರಿತು ಸ್ಥಳೀಯರು ನಿಯೋಗದ ಮುಂದೆ ತಮ್ಮ ಅಳಲನ್ನು ಹೊರಹಾಕಿದರು.
“ಮಳೆ ಮತ್ತು ಗಾಳಿಯಿಂದ ನಮ್ಮ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದಿಂದ ಸೂಕ್ತ ನೆರವು ಸಿಕ್ಕಿಲ್ಲ. ಬದುಕು ನಡೆಸುವುದೇ ಕಷ್ಟವಾಗಿದೆ” ಎಂದು ನಿವಾಸಿಗಳು ತಮ್ಮ ಸಮಸ್ಯೆಗಳನ್ನು ವಿವರಿಸಿದರು. ಕೆಲವರು ಕುಟುಂಬದ ಪರಿಸ್ಥಿತಿ ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.
ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಜೆಡಿಎಸ್ ನಿಯೋಗದ ಸದಸ್ಯರು, ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಪಕ್ಷದ ವತಿಯಿಂದ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ, ಹಾನಿಗೊಳಗಾದ ಕುಟುಂಬಗಳಿಗೆ ಅಗತ್ಯ ನೆರವು ದೊರಕಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ, “ಮಳೆ ಹಾಗೂ ಬಿರುಗಾಳಿಯಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವುದು ಅಗತ್ಯ. ಸರ್ಕಾರ ತಕ್ಷಣ ಹಾನಿ ಸಮೀಕ್ಷೆ ನಡೆಸಿ ಪರಿಹಾರಧನ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಜೆಡಿಎಸ್ ನಿಯೋಗದಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ ವೀರನಗೌಡ ನಡಗೌಡ್ರ, ಬಸವರಾಜ ಅಪ್ಪನವರ, ಪ್ರಭುರಾಜಗೌಡ ಪಾಟೀಲ, ಪ್ರಫುಲ್ ಪುಣೆಕರ್, ವಿರೂಪಾಕ್ಷಯ್ಯ ಹಿರೇಮಠ, ಶ್ರೀಕಾಂತಗೌಡ ಪಾಟೀಲ, ಆಕಾಶ್ ಸರವಳಿ ಹಾಗೂ ಹುಸೇನಸಾಬ್ ಬಿರೆಕ್ದಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP