ಮತದಾರರ ಹಕ್ಕು ಕಾಪಾಡಲು ಸರ್ಕಾರ ಬದ್ಧ: ಸಚಿವ ಹೆಚ್.ಕೆ. ಪಾಟೀಲ್
ಸಚಿವ ಸಂಪುಟ ಸಭೆಯಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ
HK patil


ಬೆಂಗಳೂರು, 21 ಮೇ (ಹಿ.ಸ.):

ಆ್ಯಂಕರ್:

ರಾಜ್ಯದ ಯಾವುದೇ ನಾಗರಿಕನ ಮತದಾನದ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವಂತಹ ಪ್ರಕ್ರಿಯೆ ನಡೆದರೆ, ಆ ಹಕ್ಕನ್ನು ರಕ್ಷಿಸಲು ಸರ್ಕಾರ ಸರ್ವಪ್ರಯತ್ನ ನಡೆಸಲಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಕುರಿತಂತೆ ಗಂಭೀರ ಚರ್ಚೆಗಳು ನಡೆದಿವೆ ಎಂದರು. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಜನರು ಮತದಾನದ ಹಕ್ಕು ಕಳೆದುಕೊಂಡಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯ ಪಾರದರ್ಶಕತೆ, ಅಂತಿಮ ಮತದಾರರ ಪಟ್ಟಿ ಹಾಗೂ ಕಾನೂನು ಸಂಬಂಧಿತ ಅಂಶಗಳ ಕುರಿತು ಇನ್ನಷ್ಟು ಚರ್ಚೆ ನಡೆಸಿ, ಅಗತ್ಯವಿದ್ದಲ್ಲಿ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರುವ ವಿಚಾರವನ್ನೂ ಪರಿಗಣಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಎನ್ಜಿಇಎಫ್ಗೆ ಆರ್ಥಿಕ ನೆರವು

ಸಚಿವ ಸಂಪುಟ ಸಭೆಯಲ್ಲಿ ಎನ್ಜಿಇಎಫ್ (ಹುಬ್ಬಳ್ಳಿ) ಸಂಸ್ಥೆಗೆ ನೀಡಿದ್ದ ರೂ.2 ಕೋಟಿ ದುಡಿಯುವ ಬಂಡವಾಳ ಸಾಲ ಮತ್ತು ಅದರ ಮೇಲಿನ ರೂ.4 ಕೋಟಿ ಬಡ್ಡಿ ಸೇರಿದಂತೆ ಒಟ್ಟು ರೂ.6 ಕೋಟಿಯನ್ನು ಹಾಗೂ ರೂ.10 ಕೋಟಿ ಬಡ್ಡಿರಹಿತ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿದೆ.

ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ

ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ ತಾಯಿ-ಮಗು ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು ರೂ.38 ಕೋಟಿ ಮಂಜೂರು ಮಾಡಲಾಗಿದೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್ಗಳಿಗೆ ಅಗತ್ಯವಾದ ಪ್ರಯೋಗಾಲಯ ಉಪಕರಣಗಳು ಹಾಗೂ ಉಪಭೋಗ್ಯ ವಸ್ತುಗಳ ಖರೀದಿಗೆ ರೂ.22 ಕೋಟಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 200 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ರೂ.100 ಕೋಟಿ ವೆಚ್ಚಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕಾರಾಗೃಹಗಳಲ್ಲಿ ಪೆಟ್ರೋಲ್ ಪಂಪ್ ಸ್ಥಾಪನೆ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಪೆಟ್ರೋಲ್ ಪಂಪ್ ಮತ್ತು ಮಾರಾಟ ಮಳಿಗೆ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಬೆಳಗಾವಿ ಮತ್ತು ಬಳ್ಳಾರಿ ಕೇಂದ್ರ ಕಾರಾಗೃಹಗಳಲ್ಲಿ ಭಾರತ್ ಪೆಟ್ರೋಲಿಯಂ ವತಿಯಿಂದ ಪೆಟ್ರೋಲ್ ಪಂಪ್ಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ.

ಶಿಕ್ಷಣ ಮತ್ತು ತರಬೇತಿಗೆ ಉತ್ತೇಜನ

ರಾಜ್ಯದ 32 ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ (GTTC) ಹೊಸ ಯಂತ್ರೋಪಕರಣಗಳು ಹಾಗೂ ಸಲಕರಣೆಗಳ ಖರೀದಿಗೆ ರೂ.90 ಕೋಟಿ ಮಂಜೂರು ಮಾಡಲಾಗಿದೆ.

ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ನೆರವಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆಯಡಿ 53 ಸರ್ಕಾರಿ ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ಗಳಿಗೆ ಒಟ್ಟು ರೂ.802 ಕೋಟಿ ಮೌಲ್ಯದ ವಸ್ತುಗಳ ಮುಂಗಡ ಖರೀದಿಗೆ ಅನುಮೋದನೆ ನೀಡಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಓದಿ 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳ 500 ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ವಸತಿ ಸಹಿತ ಪಿಯುಸಿ ಶಿಕ್ಷಣ ಹಾಗೂ NEET/JEE/CET ಪೂರ್ವ ತರಬೇತಿ ನೀಡಲು ರೂ.15 ಕೋಟಿ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ನೀರಾವರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ

ರಾಯಚೂರು ಜಿಲ್ಲೆಯ “ಮಟಮಾರಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆ”ಗೆ ರೂ.182.70 ಕೋಟಿ ಮಂಜೂರಾತಿ ನೀಡಲಾಗಿದೆ. ಇದರ ಮೂಲಕ 8,320 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ.

ಕನಕಪುರ ನಗರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ಚರಂಡಿ ಕಾಮಗಾರಿಗಳಿಗೆ ರೂ.20 ಕೋಟಿ ಹಾಗೂ ಮಂಡ್ಯ ಜಿಲ್ಲೆಯ ದಾಸನಕೆರೆ ಅಭಿವೃದ್ಧಿ ಮತ್ತು ವಿದ್ಯುದ್ದೀಕರಣಕ್ಕೆ ರೂ.25 ಕೋಟಿ ಮಂಜೂರು ಮಾಡಲಾಗಿದೆ.

ಮಂಡ್ಯ ತಾಲ್ಲೂಕಿನ ಎಸ್.ಐ. ಕೋಡಿಹಳ್ಳಿ ಗೇಟ್ನಿಂದ ಬಸರಾಳು-ಕೊಪ್ಪ ರಸ್ತೆಯವರೆಗೆ ರಸ್ತೆ ಅಭಿವೃದ್ಧಿಗೆ ರೂ.11.40 ಕೋಟಿ ಅನುಮೋದನೆ ದೊರೆತಿದೆ.

ಮೈಸೂರು ಮತ್ತು ಕಲಬುರಗಿಯಲ್ಲಿ ಭೂ ಹಸ್ತಾಂತರ

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ 17.35 ಎಕರೆ ಜಮೀನನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕಲಬುರಗಿ ಜಿಲ್ಲೆಯ ಶರಣಸಿರಸಗಿ ಗ್ರಾಮದಲ್ಲಿನ 4 ಎಕರೆ ಗೋಮಾಳ ಜಮೀನನ್ನು ಆದಿವೀರಶೈವ ಬಣಜಿಗ ಸಮಾಜಕ್ಕೆ ಮಂಜೂರು ಮಾಡಲು ನಿರ್ಧರಿಸಲಾಗಿದೆ.

ಅಂಗನವಾಡಿಗಳಿಗೆ ಶಿಕ್ಷಣ ಕಿಟ್

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ರಾಜ್ಯದ 69,922 ಅಂಗನವಾಡಿಗಳಿಗೆ ಶಾಲಾಪೂರ್ವ ಶಿಕ್ಷಣ ಕಿಟ್ ಖರೀದಿಸಲು ರೂ.20.98 ಕೋಟಿ ಮಂಜೂರು ಮಾಡಲಾಗಿದೆ.

ಮಾನವ ಹಕ್ಕುಗಳ ಆಯೋಗಕ್ಕೆ ಹೊಸ ಅಧ್ಯಕ್ಷ

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

ಮಳೆಗಾಲ ಅಧಿವೇಶನ ಕುರಿತು ಚರ್ಚೆ ಇಲ್ಲ

ರಾಜ್ಯದ ಮಳೆಗಾಲದ ಅಧಿವೇಶನ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಚಿವ ಹೆಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande