ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಸ್ಥಗಿತ
ಶಿವಮೊಗ್ಗ, 21 ಮೇ (ಹಿ.ಸ.) : ಆ್ಯಂಕರ್ : ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಸಾಕಾನೆಗಳ ಕಾಳಗದಲ್ಲಿ ಮಹಿಳಾ ಪ್ರವಾಸಿಗರು ಮೃತಪಟ್ಟ ಘಟನೆ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಬಂದ್ ಮಾಡಲಾಗಿದೆ. ಆರಂಭದಲ್ಲಿ
ಸಕ್ರೆಬೈಲು ಆನೆ ಬಿಡಾರ


ಶಿವಮೊಗ್ಗ, 21 ಮೇ (ಹಿ.ಸ.) :

ಆ್ಯಂಕರ್ : ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಸಾಕಾನೆಗಳ ಕಾಳಗದಲ್ಲಿ ಮಹಿಳಾ ಪ್ರವಾಸಿಗರು ಮೃತಪಟ್ಟ ಘಟನೆ ಹಿನ್ನೆಲೆ, ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಬಂದ್ ಮಾಡಲಾಗಿದೆ.

ಆರಂಭದಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದು ಹಾಗೂ ಪ್ರವಾಸಿಗರು ಆನೆಗಳನ್ನು ಸ್ಪರ್ಶಿಸುವುದನ್ನು ಮಾತ್ರ ನಿಷೇಧಿಸಲಾಗಿತ್ತು. ದೂರದಿಂದ ಆನೆಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯುವ ಉದ್ದೇಶದಿಂದ ಇದೀಗ ಪ್ರವಾಸಿಗರ ಪ್ರವೇಶವನ್ನೇ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಹೊಸ ಎಸ್ಒಪಿ ನಿಯಮಗಳು ಜಾರಿಗೆ ಬರುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ತುಂಗಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿರುವ ಸಕ್ರೆಬೈಲು ಆನೆ ಬಿಡಾರ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ಸಾಕಾನೆಗಳ ತರಬೇತಿ, ಆರೈಕೆ ಮತ್ತು ಆನೆಗಳ ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು.

ಇನ್ನೊಂದೆಡೆ, ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಕೆಲವು ದಿನಗಳ ಹಿಂದೆ ಎರಡು ಸಾಕಾನೆಗಳ ನಡುವೆ ಭಾರೀ ಕಾಳಗ ನಡೆದಿತ್ತು. ಈ ವೇಳೆ ತಮಿಳುನಾಡಿನ ಮಹಿಳಾ ಪ್ರವಾಸಿಗರೊಬ್ಬರು ಸಾವನ್ನಪ್ಪಿದ್ದರು. ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ‘ಮಾರ್ಥಾಂಡ’ ಹೆಸರಿನ ಸಾಕಾನೆಯೂ ಮರುದಿನ ಮೃತಪಟ್ಟಿತ್ತು.

ಈ ದುರ್ಘಟನೆ ಬಳಿಕ ರಾಜ್ಯದ ವಿವಿಧ ಆನೆ ಬಿಡಾರಗಳಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande