ಮಾಲೂರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ; ಜಿಲ್ಲಾಧಿಕಾರಿಗಳಿಂದ ಪೂರ್ವಭಾವಿ ಸಭೆ
ಮಾಲೂರಿಗೆ ಸಿ.ಎಂ. ಸಿದ್ಧರಾಮಯ್ಯ ಭೇಟಿ ; ಜಿಲ್ಲಾಧಿಕಾರಿಗಳಿಂದ ಪೂರ್ವಭಾವಿ ಸಭೆ
ಮುಖ್ಯಮಂತ್ರಿ ಸಿ.ಎಂ. ಸಿದ್ದರಾಮಯ್ಯ ಮಾಲೂರಿಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಡಾ.ಎಂ.ಆರ್.ರವಿ ಅಧಿಕಾರಿಗಳ ಪೂರ್ವ ಭಾವಿ ಸಭೆ ನಡೆಸಿದರು.


ಕೋಲಾರ, ಮೇ ೨೧(ಹಿ.ಸ) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರ ಜಿಲ್ಲೆಯ ಮಾಲೂರಿಗೆ ಆಗಮಿಸುತ್ತಿರುವುದು ನಮಗೆ ಸಿಕ್ಕ ಗೌರವ. ಯಾವುದೇ ಇಲಾಖೆಯ ಅಧಿಕಾರಿಗಳು ಅಥವಾ ನೌಕರರು ಬೇಜವಾಬ್ದಾರಿತನ ತೋರಿದರೆ ಸಹಿಸುವುದಿಲ್ಲ. ಪ್ರತಿಯೊಬ್ಬರೂ ಸಂಪೂರ್ಣ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಕೋಲಾರ ಜಿಲ್ಲಾಧಿಕಾರಿಗಳಾದ ಡಾ. ಎಂ. ಆರ್. ರವಿ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.

ಜೂನ್ ೮ರಂದು ಮಾಲೂರು ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯಮಂತ್ರಿಗಳ ಕಾರ್ಯಕ್ರಮದ ಸಿದ್ಧತೆಯಲ್ಲಿ ಕೆಲವು ಇಲಾಖೆಗಳ ನಿರಾಸಕ್ತಿಯನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಮಗೆ ಜವಾಬ್ದಾರಿ ವಹಿಸಿಲ್ಲ, ನಾವ್ಯಾಕೆ ಬರಬೇಕು, ನಮಗೂ ಇದಕ್ಕೂ ಸಂಬ0ಧವಿಲ್ಲ ಎಂಬ ಧೋರಣೆಯನ್ನು ಯಾವುದೇ ಅಧಿಕಾರಿಗಳು ತಾಳಬಾರದು. ಜಿಲ್ಲಾಡಳಿತದ ಪ್ರತಿಯೊಂದು ವಿಭಾಗದ ಅಧಿಕಾರಿಗಳು ಮತ್ತು ನೌಕರರು ಇದರಲ್ಲಿ ಸಂಪೂರ್ಣವಾಗಿ ಭಾಗಿಯಾಗಬೇಕು. ಜನರನ್ನು ಸುಮ್ಮನೆ ಕರೆತಂದು ನಿಲ್ಲಿಸುವುದಲ್ಲ, ಅವರಿಗೆ ಸರಿಯಾದ ಸೌಲಭ್ಯ ಸಿಗುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ವಿವಿಧ ಯೋಜನೆಗಳಡಿ ಒಟ್ಟು ೨೬,೬೨೭ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಗುರಿ ಹೊಂದಲಾಗಿದೆ. ಸಮಾವೇಶದ ಒಟ್ಟು ಯೋಜನೆಗಳ ಅಂದಾಜು ವೆಚ್ಚ ೨,೦೭೭ ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಒಟ್ಟು ೫೯ ಕಾಮಗಾರಿಗಳ ಉದ್ಘಾಟನೆ (ವೆಚ್ಚ: ೩೦,೪೩೧ ಲಕ್ಷ ರೂ.) ಹಾಗೂ ೨೯ ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಮಾಲೂರು ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ೨,೨೦೦ ನಿವೇಶನಗಳ ಲೇಔಟ್ ಪ್ಲಾನ್ ಅಪ್ರೂವಲ್ ಮತ್ತು ಸೈಟ್ ಫಾರ್ಮೇಷನ್ ಪ್ರಗತಿಯನ್ನು ಪರಿಶೀಲಿಸಿದ ಅವರು, ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿರುವ ಹಕ್ಕುಪತ್ರಗಳ ವಿತರಣೆಯನ್ನು ಸಮಾವೇಶದೊಳಗೆ ಪೂರ್ಣಗೊಳಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಆದೇಶಿಸಿದರು. ಇದಕ್ಕೆ ನಗರಾಭಿವೃದ್ಧಿ ಕೋಶದಿಂದ ೪೦% ಹಣ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.

ಎನ್.ಆರ್.ಎಲ್.ಎಮ್ ಮತ್ತು ಸ್ತ್ರೀಶಕ್ತಿ ಸಂಘಗಳ ಸಹಯೋಗದೊಂದಿಗೆ ಸುಮಾರು ೧೨,೯೪೩ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆತರಲು ಜಂಟಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಲಾಯಿತು. ತಾಲೂಕಿನ ಪ್ರತಿ ನ್ಯಾಯಬೆಲೆ ಅಂಗಡಿಯಿ0ದ ಕನಿಷ್ಠ ೧೦೦ ಜನರಂತೆ ಒಟ್ಟು ೧೦,೦೦೦ ಜನ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆತರಲು ಸಾರಿಗೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಯಿತು. ನೊಂದಾಯಿತ ಕಾರ್ಮಿಕರಿಗೆ ವಿತರಿಸಲು ೧,೦೦೦ ಕಿಟ್ಗಳನ್ನು ಸಿದ್ಧಪಡಿಸಲಾಗಿದ್ದು, ಫಲಾನುಭವಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸಿ ಆದೇಶಿಸಿದರು. 'ಗೃಹ ಆರೋಗ್ಯ' ಯೋಜನೆಯಡಿ ಮನೆಬಾಗಿಲಿಗೆ ಚಿಕಿತ್ಸೆ ಪಡೆದ ಕನಿಷ್ಠ ೧,೦೦೦ ಜನರನ್ನು ಆಶಾ ಕಾರ್ಯಕರ್ತೆಯರ ಮೂಲಕ ಸಮಾವೇಶಕ್ಕೆ ಕರೆತರಲು ನಿರ್ದೇಶನ ನೀಡಲಾಯಿತು.

ಮಾಲೂರು ಶಾಸಕ ಕೆ. ವೈ. ನಂಜೇಗೌಡ ಅವರು ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ನೆರಳು ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾಡಳಿತದೊಂದಿಗೆ ನಮ್ಮ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಲಿವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್ ಎಂ ಮಂಗಳ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಮಾಲೂರು ತಹಸೀಲ್ದಾರ್ ರೂಪ, ಎಲ್ಲಾ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande