ಯುಎಸ್–ಇರಾನ್ ನಡುವೆ ಶಾಂತಿ ಒಪ್ಪಂದಕ್ಕೆ ಒತ್ತಡ
ವಾಷಿಂಗ್ಟನ್, 19 ಮೇ (ಹಿ.ಸ.) : ಆ್ಯಂಕರ್ : ಜಾಗತಿಕ ತೈಲ ಸಾಗಣೆಗಾಗಿ ಅತ್ಯಂತ ಮಹತ್ವದ ಮಾರ್ಗವಾಗಿರುವ ಹರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಪಾಕಿಸ್ತಾನವು ಅಮೆರಿಕಾ ಮತ್ತು ಇರಾನ್ ನಡುವಿನ ಬಿಕ್ಕಟ್ಟನ್ನು
Trump


ವಾಷಿಂಗ್ಟನ್, 19 ಮೇ (ಹಿ.ಸ.) :

ಆ್ಯಂಕರ್ : ಜಾಗತಿಕ ತೈಲ ಸಾಗಣೆಗಾಗಿ ಅತ್ಯಂತ ಮಹತ್ವದ ಮಾರ್ಗವಾಗಿರುವ ಹರ್ಮುಜ್ ಜಲಸಂಧಿಯ ಸುತ್ತಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆ, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಪಾಕಿಸ್ತಾನವು ಅಮೆರಿಕಾ ಮತ್ತು ಇರಾನ್ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸಿರುವುದಾಗಿ ವರದಿಯಾಗಿದೆ.

ಮೂಲಗಳ ಪ್ರಕಾರ, ಈ ನಾಲ್ಕು ದೇಶಗಳು ಯುಎಸ್–ಇರಾನ್ ನಡುವಿನ ಸಂಭವನೀಯ ಸೈನಿಕ ಘರ್ಷಣೆಯನ್ನು ತಪ್ಪಿಸಲು ಮಧ್ಯಸ್ಥಿಕೆ ವಹಿಸುತ್ತಿದ್ದು, ಶಾಂತಿ ಒಪ್ಪಂದದ ದಾರಿಗೆ ಮಾತುಕತೆಗಳನ್ನು ಮುಂದುವರಿಸುತ್ತಿವೆ. ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಸಕ್ರಿಯ ಪಾತ್ರ ವಹಿಸುತ್ತಿದ್ದು, ಇರಾನ್ ಜೊತೆಗೆ ನೇರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.

ಅದೇ ವೇಳೆ, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ನಾಯಕತ್ವವು ಅಮೆರಿಕದ ಅಧ್ಯಕ್ಷರನ್ನು ಸಂಭಾವ್ಯ ದಾಳಿಯನ್ನು ಮುಂದೂಡಲು ಮನವೊಲಿಸುವಲ್ಲಿ ಯಶಸ್ವಿಯಾಗಿರುವುದಾಗಿ ವರದಿಗಳು ಹೇಳುತ್ತಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತ ಭವನದಲ್ಲಿ ಮಾತನಾಡುತ್ತ, “ಪ್ರಸ್ತುತ ಶಾಂತಿ ಒಪ್ಪಂದದ ಕುರಿತು ಗಂಭೀರ ಮಾತುಕತೆಗಳು ನಡೆಯುತ್ತಿವೆ. ನಮ್ಮ ಮಧ್ಯಪ್ರಾಚ್ಯದ ಮಿತ್ರ ರಾಷ್ಟ್ರಗಳು ತೃಪ್ತರಾಗುವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ,” ಎಂದು ಹೇಳಿದ್ದಾರೆ. ಜೊತೆಗೆ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂಬುದು ಅಮೆರಿಕದ ಪ್ರಮುಖ ಷರತ್ತಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಟ್ರಂಪ್ ಅವರ ಹೇಳಿಕೆಯ ಪ್ರಕಾರ, ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳ ಮನವಿಯ ಹಿನ್ನೆಲೆಯಲ್ಲಿ ಇರಾನ್ ಮೇಲೆ ನಡೆಯಬೇಕಿದ್ದ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಇದೇ ಸಂದರ್ಭದಲ್ಲಿ, ಇರಾನ್ ಹೊಸ ಪರಿಷ್ಕೃತ ಶಾಂತಿ ಕರಡನ್ನು ಸಲ್ಲಿಸಿರುವುದಾಗಿ ಹೇಳಲಾಗಿದೆ. ಈ ಕರಡನ್ನು ಪಾಕಿಸ್ತಾನದ ಮೂಲಕ ರವಾನಿಸಲಾಗಿದೆ ಎಂಬ ವರದಿಗಳೂ ಹೊರಬಂದಿವೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಇರಾನ್ ಅಧ್ಯಕ್ಷ ಮಸೂದ್ ಪೆಝೆಷ್ಕಿಯನ್, “ಮಾತುಕತೆ ಎಂದರೆ ಶರಣಾಗತಿ ಅಲ್ಲ. ದೇಶದ ಘನತೆ, ಸ್ವಾಯತ್ತತೆ ಮತ್ತು ಹಕ್ಕುಗಳನ್ನು ಕಾಪಾಡಿಕೊಳ್ಳುವುದೇ ನಮ್ಮ ಗುರಿ,” ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು ಇರಾನ್ ನಲ್ಲಿ ಭೇಟಿ ನಡೆಸಿದ್ದು, ಸ್ಥಗಿತಗೊಂಡಿರುವ ಯುಎಸ್–ಇರಾನ್ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರು ಇರಾನ್ ಅಧ್ಯಕ್ಷರು, ಸಂಸತ್ ಸ್ಪೀಕರ್ ಹಾಗೂ ಆಂತರಿಕ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇರಾನ್ ಅಧ್ಯಕ್ಷರು ಈ ಸಂದರ್ಭದಲ್ಲಿ, ಇಸ್ಲಾಮಿಕ್ ರಾಷ್ಟ್ರಗಳ ನಡುವೆ ಹೊಂದಾಣಿಕೆ ಮತ್ತು ಒಗ್ಗಟ್ಟು ಇದ್ದರೆ ಮಾತ್ರ ದೀರ್ಘಕಾಲೀನ ಶಾಂತಿ ಮತ್ತು ಸ್ಥಿರತೆ ಸಾಧ್ಯ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande