
ವಾಷಿಂಗ್ಟನ್, 18 ಮೇ (ಹಿ.ಸ.) :
ಆ್ಯಂಕರ್ : ಅಮೆರಿಕದ ಇದಾಹೊ ರಾಜ್ಯದಲ್ಲಿರುವ ಮೌಂಟೇನ್ ಹೋಮ್ ವಾಯುಪಡೆ ನೆಲೆ ನಲ್ಲಿ ನಡೆದ “ಗನ್ಫೈಟರ್ ಸ್ಕೈಸ್” ವಾಯು ಪ್ರದರ್ಶನದ ವೇಳೆ ಎರಡು ಯುದ್ಧ ವಿಮಾನಗಳು ಗಾಳಿಯಲ್ಲೇ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಘಟನೆ ಆತಂಕ ಸೃಷ್ಟಿಸಿದೆ. ಆದರೆ ಅದೃಷ್ಟವಶಾತ್ ಎರಡೂ ವಿಮಾನಗಳಲ್ಲಿದ್ದ ನಾಲ್ವರು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಸುರಕ್ಷಿತವಾಗಿ ಹೊರಬಂದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಈ ಅವಘಡ ಸಂಭವಿಸಿದೆ. ವಾಯು ಸಾಹಸ ಪ್ರದರ್ಶನ ನಡೆಸುತ್ತಿದ್ದ ವೇಳೆ ಎರಡು ಫೈಟರ್ ಜೆಟ್ಗಳು ಪರಸ್ಪರ ಅಪ್ಪಳಿಸಿ ನೆಲಕ್ಕೆ ಬಿದ್ದ ನಂತರ ಬೆಂಕಿಗೆ ಆಹುತಿಯಾದವು. ಅಪಘಾತದ ದೃಶ್ಯಗಳು ಸ್ಥಳದಲ್ಲಿದ್ದ ಪ್ರೇಕ್ಷಕರಲ್ಲಿ ಆತಂಕ ಮೂಡಿಸಿವೆ.
ಅಮೆರಿಕ ನೌಕಾಪಡೆಯ ಮಾಹಿತಿ ಪ್ರಕಾರ, ಅಪಘಾತಕ್ಕೀಡಾದವು ಬೋಯಿಂಗ್ EA-18G ಗ್ರೋಲರ್ ಮಾದರಿಯ ಎರಡು ಯುದ್ಧ ವಿಮಾನಗಳು. ಇವುಗಳನ್ನು ಅಮೆರಿಕ ನೌಕಾಪಡೆಯ ಎಲೆಕ್ಟ್ರಾನಿಕ್ ಅಟ್ಯಾಕ್ ಸ್ಕ್ವಾಡ್ರನ್-129 ಬಳಸುತ್ತಿತ್ತು. ಪ್ರತಿಯೊಂದು ವಿಮಾನದ ಅಂದಾಜು ಮೌಲ್ಯ ಸುಮಾರು 67 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ.
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ನೌಕಾಪಡೆಯ ವಕ್ತಾರೆ ಕಮಾಂಡರ್ ಅಮೇಲಿಯಾ ಉಮಿಯಮ್, “ಎರಡೂ ವಿಮಾನಗಳಲ್ಲಿದ್ದ ಸಿಬ್ಬಂದಿಗಳು ಸುರಕ್ಷಿತವಾಗಿ ಹೊರಬಂದಿದ್ದಾರೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ವಾಯು ಪ್ರದರ್ಶನವನ್ನು ತಕ್ಷಣವೇ ರದ್ದುಪಡಿಸಲಾಗಿದ್ದು, ಮಿಲಿಟರಿ ನೆಲೆಯ ಸುತ್ತಮುತ್ತ ಸಾರ್ವಜನಿಕರು ತೆರಳದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. “ಎಲ್ಲರೂ ಸುರಕ್ಷಿತರಾಗಿರುವುದು ಅತ್ಯಂತ ಮಹತ್ವದ ಸಂಗತಿ” ಎಂದು ಕಾರ್ಯಕ್ರಮ ಆಯೋಜಕರಾದ ಸಿಲ್ವರ್ ವಿಂಗ್ಸ್ ಸಂಸ್ಥೆಯ ಮಾರ್ಕೆಟಿಂಗ್ ನಿರ್ದೇಶಕಿ ಕಿಮ್ ಸೈಕ್ಸ್ ಹೇಳಿದ್ದಾರೆ.
“ಗನ್ಫೈಟರ್ ಸ್ಕೈಸ್” ವಾಯು ಪ್ರದರ್ಶನವು ಅಮೆರಿಕದ ವೈಮಾನಿಕ ಇತಿಹಾಸ ಹಾಗೂ ಆಧುನಿಕ ಸೇನಾ ಸಾಮರ್ಥ್ಯ ಪ್ರದರ್ಶಿಸುವ ಜನಪ್ರಿಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ವೈಮಾನಿಕ ಸಾಹಸ ಪ್ರದರ್ಶನಗಳು, ಪ್ಯಾರಾಚೂಟ್ ಜಿಗಿತಗಳು ಹಾಗೂ ಅಮೆರಿಕ ವಾಯುಪಡೆಯ ಪ್ರಸಿದ್ಧ “ಥಂಡರ್ಬರ್ಡ್ಸ್” ತಂಡದ ಪ್ರದರ್ಶನವೂ ಪ್ರಮುಖ ಆಕರ್ಷಣೆಯಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.