ಮುಂಗಾರು ಹಂಗಾಮಿಗೆ ಸಜ್ಜಾಗಲು ಕೃಷಿ ಇಲಾಖೆಗೆ ಚಲುವರಾಯಸ್ವಾಮಿ ಸೂಚನೆ
ಬೆಂಗಳೂರು, 18 ಮೇ (ಹಿ.ಸ.) : ಆ್ಯಂಕರ್ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ರೈತರಿಗೆ ಸಮಯಕ್ಕೆ ಸರಿಯಾದ ಕೃಷಿ ಪರಿಕರಗಳ ಪೂರೈಕೆ ಹಾಗೂ ವೈಜ್ಞಾನಿಕ ಸಲಹೆಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇ
Agri conference


ಬೆಂಗಳೂರು, 18 ಮೇ (ಹಿ.ಸ.) :

ಆ್ಯಂಕರ್ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ರೈತರಿಗೆ ಸಮಯಕ್ಕೆ ಸರಿಯಾದ ಕೃಷಿ ಪರಿಕರಗಳ ಪೂರೈಕೆ ಹಾಗೂ ವೈಜ್ಞಾನಿಕ ಸಲಹೆಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮಳೆಯ ಅನಿಶ್ಚಿತತೆ, ಹವಾಮಾನ ವೈಪರಿತ್ಯ ಹಾಗೂ ಬದಲಾಗುತ್ತಿರುವ ಬೆಳೆ ಮಾದರಿಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಮಟ್ಟದಲ್ಲಿ ಮುಂಚಿತ ಬೆಳೆ ಯೋಜನೆ ಮತ್ತು ಪರ್ಯಾಯ ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು. ಮಣ್ಣಿನ ಆರೋಗ್ಯ ಮತ್ತು ನೀರಿನ ಲಭ್ಯತೆಯನ್ನು ಆಧರಿಸಿ ಏಕದಳ, ದ್ವಿದಳ, ಎಣ್ಣೆಕಾಳು ಹಾಗೂ ಸಿರಿಧಾನ್ಯಗಳ ಸಮಗ್ರ ಬೆಳೆ ಪದ್ಧತಿಗೆ ಉತ್ತೇಜನ ನೀಡಲಾಗುವುದು ಎಂದರು.

ಪ್ರಮಾಣಿತ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳು ರೈತರಿಗೆ ಸಕಾಲದಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆ ರಸಗೊಬ್ಬರ ಆಮದಿನಲ್ಲಿ ಅಸ್ಥಿರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಸಮರ್ಪಕ ನಿರ್ವಹಣೆಗೆ ಸೂಕ್ಷ್ಮ ಮಟ್ಟದ ಯೋಜನೆ (ಮೈಕ್ರೋ ಪ್ಲಾನಿಂಗ್) ರೂಪಿಸಲಾಗುತ್ತಿದೆ ಎಂದು ಹೇಳಿದರು.

ರಸಗೊಬ್ಬರಗಳು ಕಾಳಸಂತೆ, ಹೆಚ್ಚಿನ ದರ ಅಥವಾ ಅಂತರ ಜಿಲ್ಲೆಗಳಿಗೆ ಅಕ್ರಮವಾಗಿ ಮಾರಾಟವಾಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು. ಡಿ.ಎ.ಪಿ ಗೊಬ್ಬರಕ್ಕೆ ಪರ್ಯಾಯವಾಗಿ ಎನ್.ಪಿ.ಕೆ ಹಾಗೂ ಎಸ್.ಎಸ್.ಪಿ ಬಳಕೆಗೆ ರೈತರಲ್ಲಿ ಅರಿವು ಮೂಡಿಸಲಾಗುವುದು. ಜೊತೆಗೆ ನ್ಯಾನೊ ಯೂರಿಯಾ ಮತ್ತು ಜೈವಿಕ ಗೊಬ್ಬರಗಳ ಬಳಕೆಯನ್ನೂ ಉತ್ತೇಜಿಸಲಾಗುವುದು ಎಂದು ತಿಳಿಸಿದರು.

‘ಕೃಷಿ ಭಾಗ್ಯ’, ಹೈಟೆಕ್ ಹಾರ್ವೆಸ್ಟರ್ ಹಬ್ ಹಾಗೂ ಬೆಳೆ ವಿಮೆ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ಕೇಂದ್ರ ಸರ್ಕಾರದ ದ್ವಿದಳಧಾನ್ಯಗಳ ಆತ್ಮನಿರ್ಭರತಾ ಅಭಿಯಾನವನ್ನು ಯಶಸ್ವಿಗೊಳಿಸಿ, ಉತ್ಪಾದಕತೆ ಹೆಚ್ಚಿಸುವ ಮೂಲಕ ಪ್ರತಿ ರೈತ ಕುಟುಂಬದ ಸುಸ್ಥಿರ ಅಭಿವೃದ್ಧಿಯೇ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಸಚಿವರು ಹೇಳಿದರು.

ಕಾರ್ಯಾಗಾರದಲ್ಲಿ ಆಯುಕ್ತ ವೈಎಸ್ ಪಾಟೀಲ್, ನಿರ್ದೇಶಕ ಜಿ.ಟಿ. ಪುತ್ರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande