
ಕೋಲಾರ, 18 ಮೇ (ಹಿ.ಸ.) :
ಆ್ಯಂಕರ್ : ಕಾರ್ಮಿಕರಿಗೆ ನೀಡುತ್ತಿದ್ದ ಕೆಲಸದ ಅವಧಿ, ಭದ್ರತೆ, ಸುರಕ್ಷತೆ, ಹಲವು ಸೌಲಭ್ಯಗಳನ್ನು ಕಾನೂನು ಬದ್ದವಾಗಿಯೇ ಕಡಿತ ಮಾಡಿರುವ ಪ್ರಧಾನಿ ಮೋದಿರವರು ಕಾರ್ಪೋರೇಟ್ ಕಂಪನಿಗಳು ಕಾರ್ಮಿಕರನ್ನು ದುಡಿಮೆಯನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಿಐಟಿಯು ರಾಜ್ಯಾಧ್ಯಕ್ಷ ಮೀನಾಕ್ಷಿಸುಂದರಂ ಆಕ್ರೋಷ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಹಿರಿಯರು ನಡೆಸಿದ ಸಮರಧೀರ ಹೋರಾಟಗಳಿಂದ ಹತ್ತಾರು ಕಾರ್ಮಿಕ ಕಾಯ್ದೆಗಳು ಜಾರಿಯಾಗಿ, ಇಲ್ಲಿಯ ತನಕ ಕಾರ್ಮಿಕರಿಗೆ ಹಲವು ಸೌಲಭ್ಯಗಳು ದೊರೆಯುತ್ತಿದ್ದವು. ಇವುಗಳನ್ನು ಮೋದಿರವರು ಪ್ರಧಾನಿಯಾದ ನಂತರ ಸೌಲಭ್ಯಗಳನ್ನು ಹೆಚ್ಚು ಮಾಡಲಾಗುತ್ತಿದೆ ಎಂದು ಸುಳ್ಳು ಹೇಳಿ ಈ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ, ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಕೆಲಸದ ಅವಧಿಯನ್ನು ಹೆಚ್ಚು ಮಾಡಲು ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ, ಊಟದ ಸಮಯವನ್ನು ಹೊರತುಪಡಿಸಿ 8 ಗಂಟೆಗೆ ದುಡಿಯಬೇಕು, ಕಾರ್ಮಿಕರು ಸಂಘವನ್ನು ರಚಿಸಿಕೊಳ್ಳಲು ಇರುವ ಸಂವಿಧಾನ ಬದ್ದ ಹಕ್ಕನ್ನು ಕಠಿಣಗೊಳಿಸಲಾಗಿದೆ, ಹೆಚ್ಚುವರಿ ಕೆಲಸ ಮಾಡಿದರೆ ಓಟಿ ಇಲ್ಲ, ಸಣ್ಣ ಪುಟ್ಟ ಕಾರಣಗಳನ್ನು ಮುಂದು ಮಾಡಿ ಕಾರ್ಮಿಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೇ ಕನಿಷ್ಠ ವೇತನ ನಿಗದಿಪಡಿಸಲು ಇಲ್ಲಿಯ ತನಕ ಇದ್ದ ಮಾನದಂಡಗಳನ್ನು ಕೈಬಿಟ್ಟು, ಯಾವುದೇ ಚರ್ಚೆ ನಡೆಸದೇ ಸರ್ಕಾರವೇ ಏಕಪಕ್ಷೀಯವಾಗಿ ಕನಿಷ್ಠ ವೇತನ ನಿಗದಿಪಡಿಸಲು ಅವಕಾಶ ನೀಡಲಾಗಿದೆ ಎಂದು ಟೀಕಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಿ.ಎನ್.ಮಂಜುನಾಥ್ ಮಾತನಾಡಿ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು, ಬಿಜೆಪಿಯ ಕಾರ್ಮಿಕ ವಿರೋಧಿ ನೀತಿಗಳನ್ನೇ ರಾಜ್ಯದಲ್ಲಿ ಜಾರಿಗೊಳಿಸುತ್ತಿದ್ದಾರೆ. ಇದರಿಂದ ಕಾರ್ಮಿಕರು ಕಡಿಮೆ ವೇತನಕ್ಕೆ ಹೆಚ್ಚಿನ ಕೆಲಸ ಮಾಡುವ ಪರಿಸ್ಥಿತಿ ಇದೆ. 9 ವರ್ಷ ಕಳೆದರೂ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿಲ್ಲ. ಈ ಕುರಿತು ಮೇ 30 ರಂದು ರಾಜ್ಯಾದ್ಯಾಂತ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿಗಳ ಮುತ್ತಿಗೆ ಹಾಕಲಾಗುತ್ತಿದ್ದು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಪಿ.ಶ್ರೀನಿವಾಸ್ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಸಂಘಟನಾ ಕಾರ್ಯ ಯೋಜನೆಯನ್ನು ಮಂಡಿಸಿದರು. ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ಎ.ಆರ್.ಬಾಬು, ಆಂಜಲಮ್ಮ ಉಪಸ್ಥಿತರಿದ್ದರು, ಎಂ.ಭೀಮರಾಜ್ ಸ್ವಾಗತಿಸಿದರು. ಹೆಚ್.ಬಿ.ಕೃಷ್ಣಪ್ಪ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್