ಮಳೆಗೆ ಗದಗ ಜಿಲ್ಲೆಯಲ್ಲಿ ಮೊದಲ ಬಲಿ
ಗದಗ, 18 ಮೇ (ಹಿ.ಸ.) : ಆ್ಯಂಕರ್ : ಗುಡುಗು–ಸಿಡಿಲು, ಭಾರೀ ಗಾಳಿ ಸಮೇತ ಸುರಿದ ಮಳೆಗೆ ಗದಗ ಜಿಲ್ಲೆಯಲ್ಲಿ ಮೊದಲ ಬಲಿ ಸಂಭವಿಸಿದೆ. ವಿದ್ಯುತ್ ಕಂಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದ ಈ ದುರ್
ಫೋಟೋ


ಗದಗ, 18 ಮೇ (ಹಿ.ಸ.) :

ಆ್ಯಂಕರ್ : ಗುಡುಗು–ಸಿಡಿಲು, ಭಾರೀ ಗಾಳಿ ಸಮೇತ ಸುರಿದ ಮಳೆಗೆ ಗದಗ ಜಿಲ್ಲೆಯಲ್ಲಿ ಮೊದಲ ಬಲಿ ಸಂಭವಿಸಿದೆ. ವಿದ್ಯುತ್ ಕಂಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ನಡೆದ ಈ ದುರ್ಘಟನೆ ಕುಟುಂಬಸ್ಥರ ಕಣ್ಣೀರಿಗೂ ಕಾರಣವಾಗಿದೆ.

ಗದಗ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ತನ್ನ ಆರ್ಭಟ ತೋರಿಸುತ್ತಿದ್ದು, ಕೆಲವೆಡೆ ಅನಾಹುತಗಳಿಗೂ ಕಾರಣವಾಗುತ್ತಿದೆ. ಈಗ ಮಳೆ ಅವಾಂತರಕ್ಕೆ ಜಿಲ್ಲೆಯಲ್ಲೇ ಮೊದಲ ಜೀವ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ ಮಂಜಪ್ಪ ನಿಂಗಪ್ಪ ಸರಸೂರಿ ಮೃತ ದುರ್ದೈವಿ. ಜೀವನೋಪಾಯಕ್ಕಾಗಿ ಕುರಿಗಾಹಿ ಕೆಲಸ ಮಾಡುತ್ತಿದ್ದ ಮಂಜಪ್ಪ, ನಿನ್ನೆ ಸಂಜೆ ಸುರಿದ ಭಾರೀ ಗಾಳಿ–ಮಳೆಯ ವೇಳೆ ಅನಾಹುತಕ್ಕೆ ಸಿಲುಕಿದ್ದಾರೆ.

ಭಾರೀ ಗಾಳಿಯ ಅಬ್ಬರಕ್ಕೆ ವಿದ್ಯುತ್ ಕಂಬವೊಂದು ಏಕಾಏಕಿ ಮಂಜಪ್ಪ ಅವರ ಕಾಲಿನ ಮೇಲೆ ಬಿದ್ದಿದೆ. ಕಂಬ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿದ್ದವರು ಹಾಗೂ ಗ್ರಾಮಸ್ಥರು ಕೂಡಲೇ ನೆರವಿಗೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಗಾಯದ ತೀವ್ರತೆ ಹೆಚ್ಚಿದ್ದರಿಂದ ಮಂಜಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರು ಚಿಕಿತ್ಸೆ ಮುಂದುವರೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಈ ಘಟನೆ ತಿಳಿಯುತ್ತಿದ್ದಂತೆ ಶಿಗ್ಲಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರು ಕೂಡ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಇನ್ನೊಂದೆಡೆ ಮಳೆ, ಗಾಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಗ್ರಾಮೀಣ ಭಾಗಗಳಲ್ಲಿರುವ ಹಳೆಯ ವಿದ್ಯುತ್ ಕಂಬಗಳು, ತಂತಿಗಳ ಸ್ಥಿತಿಗತಿಯನ್ನು ಪರಿಶೀಲಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಘಟನೆ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande