
ಚಿತ್ರದುರ್ಗ, 18 ಮೇ (ಹಿ.ಸ.) :
ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ “ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ”ದಡಿ “ಜನ್ ಭಾಗೀದಾರಿ – ಸಬ್ಸೆ ಡೋರ್, ಸಬ್ಸೆ ಪೆಹ್ಲೆ” ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಹಿತಿ ಕೊರತೆಯಿಂದ ಸರ್ಕಾರದ ಸೌಲಭ್ಯಗಳು ಬುಡಕಟ್ಟು ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ತಲುಪದೇ ಇರಬಾರದು. ಪ್ರತಿಯೊಂದು ಇಲಾಖೆಯೂ ಜವಾಬ್ದಾರಿಯಿಂದ ಜನಜಾಗೃತಿ ಮೂಡಿಸಿ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸಬೇಕು ಎಂದು ಸೂಚಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಪ್ರಯೋಜನವನ್ನು ಸಮುದಾಯದವರೆಗೆ ತಲುಪಿಸುವುದು ಅಧಿಕಾರಿಗಳ ಪ್ರಮುಖ ಜವಾಬ್ದಾರಿ ಎಂದು ಅವರು ಹೇಳಿದರು. ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್. ದಿವಾಕರ್ ಮಾತನಾಡಿ, ಮೇ 18ರಿಂದ 25ರವರೆಗೆ “ಜನ್ ಭಾಗೀದಾರಿ – ಸಬ್ಸೆ ಡೋರ್, ಸಬ್ಸೆ ಪೆಹ್ಲೆ” ಐಇಸಿ ಅಭಿಯಾನ ನಡೆಯುತ್ತಿದ್ದು, ಬುಡಕಟ್ಟು ಸಮುದಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಅವಧಿಯಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಸಿಕಲ್ ಸೆಲ್ ಅನೀಮಿಯಾ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಧಾನಮಂತ್ರಿ ಜನಮನ ಮತ್ತು ಡಿಎ–ಜೆಜಿಯುಎ ಯೋಜನೆಗಳ ಕುರಿತು ವ್ಯಾಪಕ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಇಲಾಖೆಗಳ ಅಧಿಕಾರಿಗಳು ಹಾಗೂ ಆರೋಗ್ಯ, ಪಶುಪಾಲನೆ, ಬ್ಯಾಂಕಿಂಗ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.