
ಬೆಂಗಳೂರು, 18 ಮೇ (ಹಿ.ಸ.) :
ಆ್ಯಂಕರ್ : ಪ್ರಕೃತಿ ವಿಕೋಪ ಪರಿಹಾರಕ್ಕಾಗಿ 5,000 ಕೋಟಿ ರೂ. ಮೀಸಲಿಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ ಒಂದು ನಯಾ ಪೈಸೆಯನ್ನೂ ಠೇವಣಿ ಇಟ್ಟಿಲ್ಲ. ಕಳೆದ ವರ್ಷದ ಬೆಳೆ ಪರಿಹಾರವೇ ಇನ್ನೂ ರೈತರಿಗೆ ತಲುಪಿಲ್ಲ. ಆದರೆ ಬಳ್ಳಾರಿಯಲ್ಲಿ ನಡೆದ ಸಮಾವೇಶಕ್ಕೆ 20 ಕೋಟಿ ರೂ. ಖರ್ಚು ಮಾಡಲಾಗಿದೆ. ಈಗ ತುಮಕೂರು ಸಮಾವೇಶಕ್ಕೆ ಜಿಲ್ಲಾಡಳಿತದಿಂದಲೇ 12 ಕೋಟಿ ರೂ. ಕೇಳಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಸಮಾವೇಶವಾಗಿದ್ದರೂ ಸರ್ಕಾರದ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿ ನಡೆದದ್ದೂ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ, ಈಗ ನಡೆಯುತ್ತಿರುವುದೂ ಕಾಂಗ್ರೆಸ್ ಕಾರ್ಯಕ್ರಮವೇ. ಬಿಜೆಪಿ ಅಥವಾ ಜೆಡಿಎಸ್ ಬಾವುಟ ಎಲ್ಲಿಯೂ ಕಾಣುವುದಿಲ್ಲ. ಆದರೂ ಸರ್ಕಾರದ ಹಣ ಬಳಸಲಾಗುತ್ತಿದೆ. 12 ಕೋಟಿ ರೂ.ಗಳಲ್ಲಿ 8 ಕೋಟಿ ರೂ. ದೋಚುವ ಉದ್ದೇಶದಿಂದಲೇ ಈ ಸಮಾವೇಶ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಕೃಷಿ ವೃದ್ಧಿದರ 17% ಇತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅದು 10.4%ಕ್ಕೆ ಕುಸಿದಿದೆ. ಕೃಷಿ ಕ್ಷೇತ್ರ ಕುಸಿತಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರವೇ ಕಾರಣ. ರೈತರಿಗೆ ನೀಡಬೇಕಾದ ಹಾಲು ಪ್ರೋತ್ಸಾಹಧನದ 700 ಕೋಟಿ ರೂ. ಬಾಕಿಯಿದೆ. ಬಿತ್ತನೆ ಬೀಜಗಳ ಬೆಲೆ 60% ಏರಿಕೆಯಾಗಿದೆ. ರೈತರನ್ನು ಬೀದಿಗೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು.
ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ 2.22% ಕಡಿಮೆಯಾಗಿದ್ದರೆ, ಕರ್ನಾಟಕದಲ್ಲಿ ಮಾತ್ರ 22.61% ಹೆಚ್ಚಳವಾಗಿದೆ. 2023ರಲ್ಲಿ 2,423 ರೈತರ ಆತ್ಮಹತ್ಯೆ ಪ್ರಕರಣಗಳಿದ್ದರೆ, 2024ರಲ್ಲಿ ಅದು 2,971ಕ್ಕೆ ಏರಿಕೆಯಾಗಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು NCRB ವರದಿ ಹೇಳಿದೆ. ಇದು ಕಾಂಗ್ರೆಸ್ ಸರ್ಕಾರದ “ಆರನೇ ಗ್ಯಾರೆಂಟಿ” ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ನೀಡಿರುವ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ನಂಜನಗೂಡು ಸೇರಿದಂತೆ ಹಲವು ಕಡೆಗಳಲ್ಲಿ ಇದು ಸಾಬೀತಾಗಿದೆ. ಬಳ್ಳಾರಿ, ಕಲಬುರಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಾಳಸಂತೆ ಜಾಲ ಸಕ್ರಿಯವಾಗಿದೆ. ರೈತರಿಗೆ ನೀಡಬೇಕಿದ್ದ ಸಬ್ಸಿಡಿಗಳನ್ನೂ ಸರ್ಕಾರ ನಿಲ್ಲಿಸಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರ ಖಾತೆಗೆ ವರ್ಷಕ್ಕೆ 4,000 ರೂ. ನೇರ ಹಣ ಜಮಾ ಮಾಡಲಾಗುತ್ತಿತ್ತು. ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆಯೂ ಇತ್ತು. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಸ್ಥಗಿತಗೊಳಿಸಿದೆ. ರೈತರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿ ಕಾರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.