
ಗದಗ, 15 ಮೇ (ಹಿ.ಸ.) :
ಆ್ಯಂಕರ್ : ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗೆ ತಲುಪಿಸುವಲ್ಲಿ ವಿನಾಕಾರಣ ವಿಳಂಬವಾಗಬಾರದು. ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳು ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದು ಯೋಜನೆಗಳ ಅನುಷ್ಟಾನಕ್ಕಾಗಿ ಸಂಬಂಧಿತ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಬಸ್ನಿಲ್ದಾಣಗಳು ಸ್ವಚ್ಛವಾಗಿರುವಂತೆ ಕ್ರಮ ವಹಿಸಬೇಕು. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳು ಇರುವಂತೆ ಗಮನ ಹರಿಸಬೇಕು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಬಿ.ಬಿ.ಅಸೂಟಿ ನಿರ್ದೇಶನ ನೀಡಿದರು.
ತಾಲೂಕು ಮಟ್ಟದ ಗ್ಯಾರಂಟಿ ಶಿಬಿರ, ಸಮಾವೇಶ : ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ತಾಲೂಕುಗಳಲ್ಲಿಯೂ ಗ್ಯಾರಂಟಿ ಶಿಬಿರ ಸಮಾವೇಶವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಬಿ.ಬಿ.ಅಸೂಟಿ ಅವರು ತಿಳಿಸಿದರು.
ಗದಗ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಟಾನದ ಪ್ರಾಧಿಕಾರದ ಸದಸ್ಯರಾದ ಅಶೋಕ ಮಂದಾಲಿ ಮಾತನಾಡಿ ಗೃಹ ಲಕ್ಷ್ಮೀ ಯೋಜನೆ ಸೌಲಭ್ಯದಿಂದ ಯಾವುದೇ ಫಲಾನುಭವಿ ವಂಚಿತರಾಗಬಾರದು. ಗೃಹ ಪಕ್ಷಿ ಯೋಜನೆಯ ಹಣ ಅರ್ಹ ಫಲಾನುಭವಿಗಳಿಗೆ ತಲುಪಿರುವ ಕುರಿತು ಸಮೀಕ್ಷೆ ಕಾರ್ಯ ನಡೆಸಬೇಕು. ಅನ್ನಭಾಗ್ಯ ಯೋಜನೆಯ ಸೌಲಭ್ಯ ಫಲಾನುಭವಿಗಳಿಗೆ ತಲಪುವುಲ್ಲಿ ವಿಳಂಬವಾಗಬಾರದು. ಕೆಎಸ್ಆರ್ಟಿಸಿ ಎಲ್ಲ ಘಟಕಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಮುಖ್ಯಸ್ಥರು ಅವುಗಳ ಸಮರ್ಪಕ ಅನುಷ್ಟಾನದ ಕುರಿತು ಪರಾಮರ್ಶೆ ನಡೆಸಬೇಕು. ಅರ್ಹರಿಗೆ ಯೋಜನೆಗಳ ಸೌಲಭ್ಯ ನಿಗದಿತ ಅವಧಿಯೊಳಗೆ ಲಭ್ಯವಾಗುವಂತೆ ಕ್ರಮ ವಹಿಸಲು ಸೂಚಿಸಿದ ಅವರು ಸರ್ಕಾರದ ಸೌಲಭ್ಯಗಳ ಮೂಲಕ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ದೀಪಕ ಲಮಾಣಿ ಮಾತನಾಡಿ ಶಕ್ತಿ ಯೋಜನೆ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರಯಾಣಿಸಲು ಕ್ರಮ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಹೆಸ್ಕಾಂನಿಂದ ವಿದ್ಯುತ್ ಕಂಬಗಳ ಅಳವಡಿಕೆ, ಬಸ್ ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕುರಿತು ಚರ್ಚಿಸಲಾಯಿತು.
ಪಂಚ ಗ್ಯಾರಂಟಿ ಯೋಜನೆಗಳ ಸಂಬ0ಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ಒದಗಿಸಿದರು.
ಗೃಹ ಲಕ್ಷ್ಮೀ ಯೋಜನೆಯಡಿ ಫೆಬ್ರುವರಿ 2026 ರ ಅಂತ್ಯದವರೆಗೆ 2,61,860 ನೊಂದಣಿಯಾದ ಅರ್ಜಿಗಳ ಪೈಕಿ 2,52,843 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವಾಕರಸಾಸಂಸ್ಥೆಯಿಂದ ಯೋಜನೆ ಆರಂಭವಾದಾಗಿನಿAದ 1-6-2023 ರಿಂದ 3-5-2023 ರವರೆಗೆ 155732562 ಪ್ರಯಾಣಿಕರು ಪ್ರಯಾಣಿಸಿದ್ದಾರೆ. 528,54,13,230 ರೂ. ಮಹಿಳಾ ಪ್ರಯಾಣಿಕರ ಆದಾಯವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಹೆಚ್ಚುವರಿ 5 ಕೆ ಜಿ ಅಕ್ಕಿ ಆಹಾರ ಧಾನ್ಯಗಳ ಹಂಚಿಕೆ ಯಡಿ ಫೆಬ್ರುವರಿ 2025 ರಿಂದ ಏಪ್ರಿಲ್ 2026 ರವರೆಗೆ 5,81,566,81 ಕ್ವಿಂಟಲ್ ಅಕ್ಕಿ ಹಂಚಿಕೆ ಮಾಡಲಾಗಿದೆ.
ಯುವನಿಧಿ ಯೋಜನೆಯಡಿ ಯೋಜನೆ ಆರಂಭದಿAದ ಜನೆವರಿ 2024 ರಿಂದ ಮೇ 2026 ರವರೆಗೆ 8075 ಅರ್ಜಿ ಸ್ವೀಕೃತವಾಗಿರುತ್ತವೆ. ಅದರಲ್ಲಿ 6712 ಅರ್ಹ ಫಲಾನುಭವಿಗಳಿಗೆ 19,72,45,500/- ರೂ. ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿರುತ್ತದೆ.
ಗೃಹ ಜ್ಯೋತಿ ಯೋಜನೆಯಡಿ ಯೋಜನೆ ಆರಂಭದಿಂದ ಏಪ್ರಿಲ್ 2026 ರವರೆಗೆ 274543 ಸ್ಥಾವರಗಳು ನೋಂದಣಿಯಾಗಿದ್ದು ಶೇ 98.51 ಪ್ರಗತಿಯಾಗಿದೆ.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯ ಉಪಾಧ್ಯಕ್ಷರುಗಳಾದ ಹೇಮಂತಗೌಡ ಪಾಟೀಲ, ಪಿ.ಬಿ.ಅಳಗವಾಡಿ, ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರುಗಳಾದ ಸಂಗನಗೌಡ ಪಾಟೀಲ, ಷರೀಫ್ ಬಿಳಿಎಲಿ, ವಿವೇಕ ಯಾವಗಲ್, ದೇವಪ್ಪ ಮುರ್ನಾಳ, ಪುಲಕೇಶಗೌಡ ಪಾಟೀಲ, ಶರಣಪ್ಪ ಬೆಟಗೇರಿ, ಈಶಣ್ಣ ಹುನಸೀಕಟ್ಟಿ, ವೀರಯ್ಯ ಮಠಪತಿ, ಆರ್.ಆರ್. ಗಡ್ಡದೇವರಮಠ, ಜಿ.ಪಂ. ಯೋಜನಾ ನಿರ್ದೇಶಕ ಚಳಗೇರಿ ಸೇರಿದಂತೆ ಗ್ಯಾರಂಟಿ ಯೋಜನೆಯ ಸಂಬ0ಧಿತ ಅಧಿಕಾರಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP