
ಕೋಲಾರ, ಮೇ ೧೫ (ಹಿ.ಸ) :
ಆ್ಯಂಕರ್ : ನಗರದ ಹೊರವಲಯದಲ್ಲಿರುವ ಪ್ರಸಿದ್ಧ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಪ್ರತಿನಿತ್ಯ ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ಸಾವಿರಾರು ರೋಗಿಗಳು ಮತ್ತು ಅವರ ಸಂಬAಧಿಕರು ವಿವಿಧ ಚಿಕಿತ್ಸೆಗಳಿಗಾಗಿ ಆಗಮಿಸುತ್ತಿದ್ದಾರೆ. ಆದರೆ, ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕರಿಗೆ ಸೂಕ್ತ ವಾಹನ ನಿಲುಗಡೆ (ಪಾರ್ಕಿಂಗ್) ಸೌಲಭ್ಯವಿಲ್ಲದ ಕಾರಣ ಜನಸಾಮಾನ್ಯರು ತೀವ್ರ ಪರದಾಡುವಂತಾಗಿದೆ. ಈ ಗಂಭೀರ ಸಮಸ್ಯೆಯನ್ನು ನಮ್ಮ ಕೋಲಾರ ರೈತ ಸಂಘದ ಅಧ್ಯಕ್ಷರಾದ ಕೋಟಿಗಾನಹಳ್ಳಿ ಗಣೇಶ್ಗೌಡ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಪ್ರಸ್ತುತ ಆಸ್ಪತ್ರೆಗೆ ಬರುವ ನೂರಾರು ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳನ್ನು ನಿಲ್ಲಿಸಲು ನಿಗದಿತ ಸ್ಥಳವಿಲ್ಲದ ಕಾರಣ, ಸಾರ್ವಜನಿಕರು ಅನಿವಾರ್ಯವಾಗಿ ತಮ್ಮ ವಾಹನಗಳನ್ನು ಮುಖ್ಯ ರಸ್ತೆಯ ಪಕ್ಕದಲ್ಲೇ ಸಾಲಾಗಿ ನಿಲ್ಲಿಸಿ ಆಸ್ಪತ್ರೆಯ ಒಳಗೆ ಹೋಗುತ್ತಿದ್ದಾರೆ. ಇದರಿಂದಾಗಿ ಈ ಪ್ರಮುಖ ಮಾರ್ಗದಲ್ಲಿ ಪ್ರತಿನಿತ್ಯ ತೀವ್ರ ವಾಹನ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗುತ್ತಿದ್ದು, ಪಾದಚಾರಿಗಳಿಗೂ ಹಾಗೂ ತುರ್ತು ಚಿಕಿತ್ಸೆಗೆ ಬರುವ ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೂ ಭಾರಿ ಅಡ್ಡಿಯಾಗುತ್ತಿದೆ. ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ಎದುರಾಗಿರುವ ಈ ಎಲ್ಲಾ ತೊಂದರೆಗಳಿಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಬೇಜವಾಬ್ದಾರಿತನವೇ ನೇರ ಹೊಣೆ ಎಂದು ಗಣೇಶ್ಗೌಡ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಆಸ್ಪತ್ರೆಗೆ ಬರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಂದ ಚಿಕಿತ್ಸೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಆಡಳಿತ ಮಂಡಳಿಯು, ರೋಗಿಗಳಿಗೆ ಹಾಗೂ ಅವರ ಸಂಬ0ಧಿಕರಿಗೆ ಕನಿಷ್ಠ ಮೂಲಭೂತ ಸೌಕರ್ಯವಾದ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸದಿರುವುದು ಅತ್ಯಂತ ಖಂಡನೀಯ ಸಂಗತಿಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಆಸ್ಪತ್ರೆಯ ಆಡಳಿತ ಮಂಡಳಿಯು ತಕ್ಷಣವೇ ಎಚ್ಚೆತ್ತುಕೊಂಡು, ಸುಸಜ್ಜಿತವಾದ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ಈ ಪಾರ್ಕಿಂಗ್ ಸಮಸ್ಯೆಗೆ ಶೀಘ್ರದಲ್ಲಿಯೇ ಸೂಕ್ತ ಶಾಶ್ವತ ಪರಿಹಾರ ಒದಗಿಸದಿದ್ದರೆ, ಸಾರ್ವಜನಿಕರ ಹಿತರಕ್ಷಣೆಗಾಗಿ 'ನಮ್ಮ ಕೋಲಾರ ರೈತ ಸಂಘ'ದ ವತಿಯಿಂದ ಆಸ್ಪತ್ರೆಯ ಮುಂಭಾಗದಲ್ಲಿಯೇ ಕರಪತ್ರಗಳನ್ನು ಹಿಡಿದು ಉಗ್ರ ಹೋರಾಟ ಹಾಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ಕೋಟಿಗಾನಹಳ್ಳಿ ಗಣೇಶ್ಗೌಡ ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್