
ಕೋಲಾರ, ಮೇ ೧೫ (ಹಿ.ಸ) :
ಆ್ಯಂಕರ್ : ನಗರದ ಹೊರವಲಯದ ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ (ಆರ್.ಎಲ್.ಜಲಪ್ಪ ಜ್ಞಾನಕೇಂದ್ರ) ಸಭಾಂಗಣದಲ್ಲಿ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಡಿಎಂಡ್ ಯುನಿವರ್ಸಿಟಿ) ೧೬ನೇ ವಾರ್ಷಿಕ ಘಟಿಕೋತ್ಸವವನ್ನು ಮೇ ೧೮ ರಂದು (ಸೋಮವಾರ) ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವಾನ್ವಿತ ಕುಲಾಧಿಪತಿಗಳಾದ ಜಿ.ಎಚ್. ನಾಗರಾಜ್ ತಿಳಿಸಿದರು.
ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಕುಲಾಧಿಪತಿಗಳಾದ ಜಿ.ಹೆಚ್ ನಾಗರಾಜ್ ಸೇರಿದಂತೆ ಇತರ ಗಣ್ಯರು ಸಾಧಕ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡುವರು ಎಂದರು.
ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರಾದ ಡಾ. ಶಶಿಧರ್ ಮಾತನಾಡಿ, ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ ಒಟ್ಟು ೪೬೯ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ವೈದ್ಯಕೀಯ ವಿಭಾಗದಲ್ಲಿ (ಎಂ.ಡಿ/ಎ0.ಎಸ್) ೧೦೦ ವಿದ್ಯಾರ್ಥಿಗಳು ಹಾಗೂ ಎಂಬಿಬಿಎಸ್ ವಿಭಾಗದ ೧೮೨ ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಅಲ್ಲದೆ, ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗದಲ್ಲಿ ಮೂವರಿಗೆ ಪಿಎಚ್.ಡಿ ಸೇರಿದಂತೆ ಒಟ್ಟು ೧೯೧ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತಿದೆ.
ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು ೧೨ ಚಿನ್ನದ ಪದಕಗಳನ್ನು ನೀಡಲಾಗುತ್ತಿದ್ದು, ಎಂಬಿಬಿಎಸ್ ಪದವಿ ವಿಭಾಗದ ಪ್ರತಿ ವರ್ಷದ ಸಾಧನೆ ಹಾಗೂ ಓವರ್ ಆಲ್ ಸಾಧನೆಗಾಗಿ ನೀಡಲಾಗುವ ಒಟ್ಟು ೫ ಚಿನ್ನದ ಪದಕಗಳನ್ನು ಡಾ. ಭಾವಿಕಾ ಎಂಬ ವಿದ್ಯಾರ್ಥಿನಿ ಒಬ್ಬರೇ ಮುಡಿಗೇರಿಸಿಕೊಂಡಿದ್ದಾರೆ. ಅಲೈಡ್ ಹೆಲ್ತ್ ಸೈನ್ಸಸ್ನ ವಿವಿಧ ವಿಭಾಗಗಳಲ್ಲಿಯೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್. ಜಯರಾಮ್ ಅವರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಯರಾಮ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಜಾತಿ ಪದ್ಧತಿ ನಿರ್ಮೂಲನೆ, ಬಾಲ್ಯ ಕಾರ್ಮಿಕ ಪದ್ಧತಿ ತಡೆ ಹಾಗೂ ಬಡತನ ನಿರ್ಮೂಲನೆಗೆ ಶ್ರಮಿಸಿದ್ದಾರೆ. ಪ್ರಸ್ತುತ ಅವರು ಭೌಗೋಳಿಕ ಸೂಚ್ಯಂಕ ಉತ್ಪನ್ನಗಳ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಘಟಿಕೋತ್ಸವದ ಅಂಗವಾಗಿ ಅಂದೇ ವಿಶ್ವವಿದ್ಯಾಲಯದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಆಡಳಿತ ಮಂಡಳಿ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ರೇಡಿಯೋಥೆರಪಿ ಚಿಕಿತ್ಸೆ ನೀಡುವ ಅತ್ಯಾಧುನಿಕ ‘ಲೀನಿಯರ್ ಆಕ್ಸಿಲರೇಟರ್’ ಉಪಕರಣವನ್ನು ಲೋಕಾರ್ಪಣೆ ಮಾಡಲಾಗುವುದು. ಈ ಉಪಕರಣದ ಮೂಲಕ ಈಗಾಗಲೇ ದಿನಕ್ಕೆ ೪೦ ರಿಂದ ೪೫ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದನ್ನು ದಿನಕ್ಕೆ ೭೦ ರೋಗಿಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ಸ0ಸ್ಥೆಯ ಸೇವೆಗಳ ಕುರಿತು ಮಾತನಾಡಿದ ಚಾನ್ಸಲರ್ ಜಿ.ಎಚ್. ನಾಗರಾಜ್, ನಮ್ಮ ಆಸ್ಪತ್ರೆಯು ರಾಷ್ಟ್ರೀಯ ಮಟ್ಟದಲ್ಲಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶಸ್ತಿಗಳನ್ನು ಪಡೆದು ಕೀರ್ತಿ ತಂದಿದೆ. ಬಡ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಉಚಿತವಾಗಿ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲೇ ಲಿವರ್ ಟ್ರಾನ್ಸ್ಪ್ಲಾಂಟ್ (ಯಕೃತ್ತು ಕಸಿ) ಮತ್ತು ಕಿಡ್ನಿ ಟ್ರಾನ್ಸ್ಪ್ಲಾಂಟ್ (ಮೂತ್ರಪಿಂಡ ಕಸಿ) ಚಿಕಿತ್ಸೆಗಳನ್ನು ಪ್ರಾರಂಭಿಸಲು ಅನುಮತಿ ಸಿಕ್ಕಿದ್ದು, ತಜ್ಞ ವೈದ್ಯರ ನೇಮಕವಾಗಿದೆ ಎಂದರು.
ರಾಷ್ಟ್ರೀಯ ಮಟ್ಟದ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ನಮ್ಮ ಸಂಸ್ಥೆಯು ೮ನೇ ಸ್ಥಾನ ಪಡೆದಿದೆ. ಸಂಸ್ಥೆಯ ಈ ಸಾಧನೆಗೆ ರಾತ್ರಿ-ಹಗಲು ದುಡಿದ ವೈದ್ಯರು, ಪ್ಯಾರಾಕ್ಲಿನಿಕಲ್ ಸಿಬ್ಬಂದಿ ಮತ್ತು ಒಟ್ಟಾರೆ ಆಡಳಿತ ಮಂಡಳಿಯ ಶ್ರಮವೇ ಕಾರಣ ಎಂದು ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕುಲಪತಿಗಳಾದ ಡಾ.ಬಿ.ವೆಂಗಮ್ಮ ಉಪಾಧ್ಯಕ್ಷರಾದ ಜಿ.ರಾಜೇಂದ್ರ, ಕಾರ್ಯದರ್ಶಿಗಳಾದ ಜೆ.ಜಿ.ಹನುಮಂತರಾಜು, ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಡಿ.ವಿ.ಎಲ್.ಎನ್. ಪ್ರಸಾದ್ ಸಂಸ್ಥೆಯ ರಿಜಿಸ್ಟ್ರಾರ್, ಮೆಡಿಕಲ್ ಡೆಪ್ಯುಟಿ ಸೂಪರಿಂಟೆ0ಡೆ0ಟ್ ಡಾ. ದಿನೇಶ್, ಪರೀಕ್ಷಾ ನಿಯಂತ್ರಣಾಧಿಕಾರಿಗಳಾದ ಡಾ. ಶಶೀಧರ್.ಕೆ ಸೇರಿದಂತೆ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್