ಬಲ್ಡೋಟ ತೊಲಗಿಸಿ ಹೋರಾಟ 197ನೇ ದಿನಕ್ಕೆ
ಕೊಪ್ಪಳ, 15 ಮೇ (ಹಿ.ಸ.) : ಆ್ಯಂಕರ್ : ನಗರಸಭೆ ಮುಂದೆ ನಡೆಯುತ್ತಿರುವ 197ನೇ ದಿನದ ಧರಣಿಗೆ ಗವಿಶ್ರೀನಗರ ನಾಗರಿಕ ಅಭಿವೃದ್ಧಿ ಸಮಿತಿಯಿಂದ ಧರಣಿಗೆ ಬಂಬಲ ನೀಡಿದರು. ಸಮಿತಿ ಮುಖಂಡ ಎಚ್ಚರೇಶ ಹೊಸಮನಿ ಇವರು, ಅಭಿವೃದ್ಧಿ ಹೆಸರಿನಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿದರೆ ಮೊದಲು ಪರಿಸರ ಹಾಳಾಗದಂತೆ ನೋಡಿಕೊಂ
ಬಲ್ಡೋಟ ತೊಲಗಿಸಿ ಹೋರಾಟ 197ನೇ ದಿನಕ್ಕೆ - ನಾಗರಿಕರಿಂದ ಬೆಂಬಲ


ಕೊಪ್ಪಳ, 15 ಮೇ (ಹಿ.ಸ.) :

ಆ್ಯಂಕರ್ : ನಗರಸಭೆ ಮುಂದೆ ನಡೆಯುತ್ತಿರುವ 197ನೇ ದಿನದ ಧರಣಿಗೆ ಗವಿಶ್ರೀನಗರ ನಾಗರಿಕ ಅಭಿವೃದ್ಧಿ ಸಮಿತಿಯಿಂದ ಧರಣಿಗೆ ಬಂಬಲ ನೀಡಿದರು. ಸಮಿತಿ ಮುಖಂಡ ಎಚ್ಚರೇಶ ಹೊಸಮನಿ ಇವರು, ಅಭಿವೃದ್ಧಿ ಹೆಸರಿನಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿದರೆ ಮೊದಲು ಪರಿಸರ ಹಾಳಾಗದಂತೆ ನೋಡಿಕೊಂಡರಷ್ಟೇ ಆರೋಗ್ಯ ಸುರಕ್ಷತೆ ಇರುತ್ತದೆ. ಬದಲಾಗಿ ಇಲ್ಲಿ ಈಗೇನಾಗುತ್ತಿದೆ ಎನ್ನುವುದನ್ನು ನಾವು ಅನುಭವಿಸುತ್ತಿರುವ ಎಂ.ಎಸ್.ಪಿ.ಎಲ್ ಪೆಲ್ಲೆಟ್ ಘಟಕ ಅದರ ಕಂದು ಧೂಳು, ಹಾರುಬೂದಿ, ಹೊಗೆಯಿಂದ ಹೊರ ಚೆಲ್ಲುವುದರಿಂದ ಗವಿಶ್ರೀನಗರ, ಡಾಲರ್ಸ್ ಕಾಲೊನಿ, ಕವಲೂರು ಬಡಾವಣೆ, ಶ್ರೀಗವಿಮಠ ಮುಂತಾದ ಬಡಾವಣೆಗಳು ಅತೀವ ಮಾಲಿನ್ಯಕ್ಕೆ ಒಳಗಾಗಿ ಜನರು ಆರೋಗ್ಯದ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ಅಭಿವೃದ್ಧಿ ಅಂದರೆ ಅದು ಆರೋಗ್ಯ, ಜೀವ ರಕ್ಷಣೆಯೊಂದಿಗೆ ಸರ್ವೋತೊಮುಖ ಅಭಿವೃದ್ಧಿಗೆ ಆದ್ಯತೆ ಇರಬೇಕು. ನಗರಕ್ಕಷ್ಟೇ ಈ ಸಮಸ್ಯೆ ಸೀಮಿತವಾಗಿಲ್ಲ. 22 ಹಳ್ಳಿಗಳು ಈ ಸಮಸ್ಯೆಯಿಂದ ವಿಲವಿಲ ಒದ್ದಾಡುತ್ತಿವೆ. ನಗರದ ಜನತೆ ಈ ವಿಷಯದಲ್ಲಿ ಮೌನವಹಿಸಿದರೆ ಭವಿಷ್ಯದಲ್ಲಿ ಕೊಪ್ಪಳ ಅಪಾಯಕ್ಕೆ ಸಿಲುಕುತ್ತದೆ. ಬಾಧಿತರಾದ ಈ ಭಾಗದ ಜನರು ಅಷ್ಟೇ ಅಲ್ಲದೆ ದೆಹಲಿಯಿಂದ ಗುಣ ಪಾಠ ಕಲಿತು ಹೋರಾಡೋಣ ಎಂದರು.

ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿಕೆ ನೀಡಿ, ದಿ: 18.05.2026ರಂದು ಸೋಮವಾರ ಹೋರಾಟ 200 ದಿನದಲ್ಲಿ ಮಹಾಸಭೆ ಏರ್ಪಡಿಸಿದೆ. ಅಂದು ಧರಣಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಲಾಗುತ್ತದೆ. ಆರ್ಥಿಕ ತಜ್ಞ, ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ, ನಿರ್ಮಲ ತುಂಗಭದ್ರಾ ಆಂದೋಲನದ ಗಂಗಾವತಿ ನಿವಾಸಿ ಡಾ. ಶಿವಕುಮಾರ ಮಾಲಿಪಾಟೀಲ್ ಅತಿಥಿಗಳಾಗಿ ಆಗಮಿಸಿ ಹೋರಾಟ ಬೆಂಬಲಿಸಿ ಮಾತನಾಡುತ್ತಾರೆ. ಕೊಪ್ಪಳ ನಗರ ಮತ್ತು ಕಾರ್ಖಾನೆ ಬಾಧಿತ ಗ್ರಾಮಗಳ ರೈತರು, ಗ್ರಾಮೀಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ವಿಶೇಷ ಧರಣಿ ಹೋರಾಟದಲ್ಲಿ ಭಾಗವಹಿಸಬೇಕೆಂದು ವೇದಿಕೆಯಲ್ಲಿ ಮನವಿ ಮಾಡಿದರು.

ಕೊಪ್ಪಳ ಭಾಗ್ಯನಗರದ ಒಂದೂವರೆ ಲಕ್ಷ ಜನರ ಆರೋಗ್ಯ ಹಾನಿ ಮಾಡಲು ಬರುತ್ತಿರುವ ಬಲ್ಡೋಟ ಕಾರ್ಖಾನೆ ಕುರಿತು ಗವಿಶ್ರೀಗಳು ಧರ್ಮಾದೇಶ ಮಾಡಿರುವಂತೆ ವಿಸ್ತರಣೆಯನ್ನು ತಡೆದ ಆದೇಶ ಪತ್ರವನ್ನು ಜನಪ್ರತಿನಿಧಿಗಳು ತರಬೇಕು. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ನಗರದ ಅರ್ಧ ವಾರ್ಡಗಳು ಮಾಲಿನ್ಯ ಬಾಧಿವಾಗುತ್ತಿದ್ದು, ಆರೋಗ್ಯದ ದುಷ್ಪರಿಣಾಮ ತಡೆಯಲು ಈ ಘಟಕ ಬಂದ್ ಮಾಡಿ, ನಗರದ ಜನರ ಆರೋಗ್ಯ ಉಳಿಸಬೇಕು. ಬಲ್ಡೋಟ ಕಂಪನಿಯು ಬಸಾಪುರ ಕೆರೆಯನ್ನು ಅನಧಿಕೃತವಾಗಿ ಮಂಜೂರಿ ಪಡೆದಿದ್ದು ಸುತ್ತಲಿನ ಸಾವಿರಾರು ಜಾನುವಾರು ನೀರು ಕುಡಿಯಲು ಕಾಂಪೌಂಡ್ ತೆರವು ಮಾಡಿ ಅವಕಾಶ ಮಾಡಿಕೊಡಬೇಕು. ತುಂಗಭದ್ರಾ ನೀರು ವಿಷಗೊಳಿಸುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕು ಎಂದು ಧರಣಿ ನಡೆಯುತ್ತಿದೆ.

ಧರಣಿಯಲ್ಲಿ ಗವಿಶ್ರೀನಗರದ ಅಮರೇಶ ಕಮ್ಮಾರ, ಮಹೇಶ ಅಣ್ಮಿಗೇರಿ, ಎಂ.ಟೆಕ್ ವಿದ್ಯಾರ್ಥಿ ಪ್ರೀತಂ ಹೊಸಮನಿ, ರಾಜಶೇಖರ ಏಳುಬಾವಿ, ಹೋರಾಟ ವೇದಿಕೆ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ ಮತ್ತು ಮಂಜುನಾಥ ಜಿ. ಗೊಂಡಬಾಳ, ಪ್ರಕಾಶಕ ಡಿ ಎಂ. ಬಡಿಗೇರ, ಶಂಭುಲಿಂಗಪ್ಪ ಹರಗೇರಿ, ಕಳಕಪ್ಪ ಗಂಗಾವತಿ, ಮಹಾದೇವಪ್ಪ ಮಾವಿನಮಡು, ಶರಣು ಶೆಟ್ಟರು, ನಾಗರಾಜ ಕುಷ್ಟಗಿ ಲಾಚನಕೇರಿ, ಬಸವರಾಜಪ್ಪ ಶೆಟ್ಟರ್, ವಿಜಯಮಹಾಂತೇಶ ಹಟ್ಟಿ, ಗಂಗಮ್ಮ ಕುರುಗೋಡು, ಶಿವಪ್ಪ ಜಲ್ಲಿ, ಪಂಪಣ್ಣ ಚಿಂತಪಲ್ಲಿ, ಕಾಶಪ್ಪ ಚಲವಾದಿ, ಶಿವರಾಜ ಸಿ. ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande