
ವಿಜಯಪುರ, 14 ಮೇ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಗ್ರಾಮೀಣ ಭಾಗದ ಕೂಲಿಕಾರರು ಉದ್ಯೋಗದಲ್ಲಿ ತೊಡಗಿಸಿಕೊಂಡು ಬದುಕಿಗೆ ಹೊಸ ಭರವಸೆ ಕಂಡುಕೊಳ್ಳುತ್ತಿದ್ದಾರೆ.
ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ನೂರು ದಿನಗಳ ಉದ್ಯೋಗ ಭದ್ರತೆ ಒದಗಿಸುವ ಈ ಯೋಜನೆ, ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದರ ಜೊತೆಗೆ ಸ್ವಾವಲಂಬಿ ಬದುಕಿನತ್ತ ದಾರಿ ತೋರಿಸುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳ ಪುನಶ್ಚೇತನ, ಮಣ್ಣು ಸಂರಕ್ಷಣೆ, ರಸ್ತೆ ಅಭಿವೃದ್ಧಿ, ಕಾಲುವೆ ಸ್ವಚ್ಛತೆ, ಗಿಡ ನೆಡುವುದು ಸೇರಿದಂತೆ ವಿವಿಧ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಈ ಕೆಲಸಗಳ ಮೂಲಕ ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವುದರ ಜೊತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಾಗುತ್ತಿದೆ.
ನರೇಗಾ ಯೋಜನೆಯಡಿ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಕುಟುಂಬದ ಆರ್ಥಿಕ ಸ್ಥಿತಿಗೆ ಕೈಜೋಡಿಸುತ್ತಿದ್ದಾರೆ. ಪ್ರತಿದಿನದ ಕೂಲಿಯೊಂದಿಗೆ ಗ್ರಾಮದಲ್ಲೇ ಉದ್ಯೋಗ ಸಿಗುತ್ತಿರುವುದು ವಲಸೆ ತಡೆಯಲು ಸಹಕಾರಿಯಾಗುತ್ತಿದೆ ಎಂದು ಕೂಲಿಕಾರರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಕಾಮಗಾರಿಗಳು ಗ್ರಾಮೀಣ ಅಭಿವೃದ್ಧಿಗೆ ಹೊಸ ಚೈತನ್ಯ ತುಂಬುತ್ತಿವೆ. ಕೂಲಿಕಾರರ ಶ್ರಮ, ಸರ್ಕಾರದ ಯೋಜನೆ ಹಾಗೂ ಸ್ಥಳೀಯ ಆಡಳಿತದ ಸಹಭಾಗಿತ್ವದಿಂದ ಗ್ರಾಮಗಳು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿವೆ.
ಹಿಂದೂಸ್ತಾನ್ ಸಮಾಚಾರ್ / jyothi deshpande