
ವಿಜಯಪುರ, 14 ಮೇ (ಹಿ.ಸ.) :
ಆಂಕರ್ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ದಿನಾಂಕ 14-05-2026 ರಂದು ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ವ್ಯಾಪ್ತಿಯ ರೈತ ಸಂತ್ರಸ್ತರಿಗೆ ಲೋಕ ಅದಾಲತ್ ಕುರಿತು ಅರಿವು ಮೂಡಿಸುವ ಹಾಗೂ ನ್ಯಾಯಾಲಯದ ಮೊರೆಹೋದ ಪ್ರಕರಣಗಳನ್ನು ಸೌಹಾರ್ದಯುತವಾಗಿ ಮತ್ತು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಉತ್ತೇಜಿಸುವ ಉದ್ದೇಶದಿಂದ ವಿಶೇಷ ಗ್ರಾಮಸಭೆ ಆಯೋಜಿಸಲಾಯಿತು.
ಗ್ರಾಮಸಭೆಯು ಮಾನ್ಯ ಮಹಾ ವ್ಯವಸ್ಥಾಪಕರು (ಪುನರ್ವಸತಿ ಮತ್ತು ಪುನರ್ ಸ್ಥಾಪನೆ, ಭೂಸ್ವಾಧೀನ, ಕೃಷ್ಣಾ ಮೇಲ್ದಂಡೆ ಯೋಜನೆ) ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ವಿಶೇಷ ಜಿಲ್ಲಾಧಿಕಾರಿಗಳು, ಜಮಖಂಡಿ (ಪುನರ್ವಸತಿ ಮತ್ತು ಪುನರ್ ಸ್ಥಾಪನೆ, ಭೂಸ್ವಾಧೀನ, ಕೃಷ್ಣಾ ಮೇಲ್ದಂಡೆ ಯೋಜನೆ) ಅವರು ಉಪಸ್ಥಿತರಿದ್ದು ರೈತರಿಗೆ ಮಹತ್ವದ ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಕಡಿಮೆ ಅವಧಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ವಿಶೇಷವಾಗಿ ಭೂಸ್ವಾಧೀನ, ಪರಿಹಾರ ಧನ, ಪುನರ್ವಸತಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಅನೇಕ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ರೈತ ಸಂತ್ರಸ್ತರಿಗೆ ಲೋಕ ಅದಾಲತ್ನ ಪ್ರಕ್ರಿಯೆ, ಅದರ ಪ್ರಯೋಜನಗಳು ಹಾಗೂ ನ್ಯಾಯಾಂಗದ ವಿಳಂಬ ತಪ್ಪಿಸಿ ತ್ವರಿತ ಪರಿಹಾರ ಪಡೆಯುವ ಮಾರ್ಗಗಳ ಕುರಿತು ವಿವರವಾಗಿ ತಿಳಿಸಲಾಯಿತು. ಕಾನೂನು ಹೋರಾಟದಿಂದ ಮಾನಸಿಕ ಹಾಗೂ ಆರ್ಥಿಕ ಒತ್ತಡ ಅನುಭವಿಸುತ್ತಿರುವ ರೈತರಿಗೆ ಲೋಕ ಅದಾಲತ್ ಉತ್ತಮ ಪರ್ಯಾಯ ವ್ಯವಸ್ಥೆಯಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಹಲವಾರು ರೈತರು ತಮ್ಮ ಸಮಸ್ಯೆಗಳು, ಪರಿಹಾರ ಧನದ ವಿಚಾರಗಳು ಹಾಗೂ ಬಾಕಿ ಉಳಿದಿರುವ ನ್ಯಾಯಾಂಗ ಪ್ರಕರಣಗಳ ಕುರಿತು ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಧಿಕಾರಿಗಳು ರೈತರ ಅಹವಾಲುಗಳಿಗೆ ಸ್ಪಂದಿಸಿ, ಸರ್ಕಾರದ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸಭೆಯಲ್ಲಿ ಸ್ಥಳೀಯ ಗ್ರಾಮಸ್ಥರು, ರೈತ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂತ್ರಸ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande