
ನವದೆಹಲಿ, 13 ಮೇ (ಹಿ.ಸ.) :
ಆ್ಯಂಕರ್ : ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಗೆ ₹12 ಲಕ್ಷ ದಂಡ ವಿಧಿಸಲಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕನಿಷ್ಠ ಓವರ್ ರೇಟ್ ನಿಯಮ ಉಲ್ಲಂಘನೆಯಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸಂಬಂಧಿಸಿದ ನೀತಿ ಸಂಹಿತೆಯ 2.22ನೇ ವಿಧಿಯ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಋತುವಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ನಡೆದ ಮೊದಲ ಓವರ್ ರೇಟ್ ಉಲ್ಲಂಘನೆಯಾಗಿರುವುದರಿಂದ ನಾಯಕ ಪ್ಯಾಟ್ ಕಮಿನ್ಸ್ ಗೆ ₹12 ಲಕ್ಷ ದಂಡ ವಿಧಿಸಲಾಗಿದೆ.
ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 82 ರನ್ ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.
ಆರಂಭದಲ್ಲಿ ನಾಯಕ ಶುಭ್ಮನ್ ಗಿಲ್ 5 ರನ್ ಹಾಗೂ ಜೋಸ್ ಬಟ್ಲರ್ 7 ರನ್ ಗಳಿಸಿ ಔಟಾದರೂ, ಸಾಯಿ ಸುದರ್ಶನ್ 61 ರನ್ ಗಳಿಸಿ ತಂಡಕ್ಕೆ ಆಧಾರವಾದರು. ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ ತಂಡವನ್ನು ಉತ್ತಮ ಮೊತ್ತಕ್ಕೆ ಕೊಂಡೊಯ್ದರು.
169 ರನ್ ಗಳ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಸಂಪೂರ್ಣ ಕುಸಿತ ಕಂಡಿತು. ಮೊಹಮ್ಮದ್ ಸಿರಾಜ್ ಮೊದಲ ಓವರ್ನಲ್ಲೇ ಟ್ರಾವಿಸ್ ಹೆಡ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ಕಗಿಸೊ ರಬಾಡ ಬಿರುಸಿನ ಬೌಲಿಂಗ್ ನಡೆಸಿ ಹೈದರಾಬಾದ್ ಬ್ಯಾಟಿಂಗ್ ದಂಡೆಯನ್ನು ಮಣಿಸಿದರು.
ಪ್ಯಾಟ್ ಕಮಿನ್ಸ್ 19 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರ್ ಮಾಡಿದರೂ, ಸೋಲಿನಿಂದ ತಂಡವನ್ನು ಪಾರು ಮಾಡಲು ಸಾಧ್ಯವಾಗಲಿಲ್ಲ. ಹೈದರಾಬಾದ್ ತಂಡ 14.5 ಓವರ್ಗಳಲ್ಲಿ ಕೇವಲ 86 ರನ್ಗಳಿಗೆ ಆಲೌಟ್ ಆಯಿತು.
ಗುಜರಾತ್ ಪರ ಕಗಿಸೊ ರಬಾಡ 28 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಜೇಸನ್ ಹೋಲ್ಡರ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ತಲಾ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.