ಸತತ ಎರಡನೇ ದಿನ ಕುಸಿದ ಷೇರುಪೇಟೆ
ನವದೆಹಲಿ, 12 ಮೇ (ಹಿ.ಸ.) : ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆಯ ಪರಿಣಾಮವಾಗಿ ಭಾರತೀಯ ಷೇರುಪೇಟೆ ಸತತ ಎರಡನೇ ವಹಿವಾಟಿನ ದಿನವೂ ಭಾರೀ ಕುಸಿತ ಕಂಡಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲೇ ಹೂ
Market


ನವದೆಹಲಿ, 12 ಮೇ (ಹಿ.ಸ.) :

ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆಯ ಪರಿಣಾಮವಾಗಿ ಭಾರತೀಯ ಷೇರುಪೇಟೆ ಸತತ ಎರಡನೇ ವಹಿವಾಟಿನ ದಿನವೂ ಭಾರೀ ಕುಸಿತ ಕಂಡಿದೆ.

ಮಂಗಳವಾರದ ಆರಂಭಿಕ ವಹಿವಾಟಿನಲ್ಲೇ ಹೂಡಿಕೆದಾರರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಾರುಕಟ್ಟೆ ಕೆಂಪು ಬಣ್ಣದಲ್ಲಿ ವಹಿವಾಟು ನಡೆಸಿತು.

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 768.84 ಅಂಕಗಳು ಅಥವಾ ಶೇಕಡಾ 1.01ರಷ್ಟು ಕುಸಿದು 75,246.44 ಅಂಕಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕವೂ 210.05 ಅಂಕಗಳು ಅಥವಾ ಶೇಕಡಾ 0.88ರಷ್ಟು ಇಳಿಕೆ ಕಂಡು 23,605.80 ಅಂಕಗಳಲ್ಲಿ ವಹಿವಾಟು ನಡೆಸಿತು.

ಮಾರುಕಟ್ಟೆ ತಜ್ಞರ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯಲ್ಲಿ ಉಂಟಾದ ಅನಿಶ್ಚಿತತೆ ಜಾಗತಿಕ ಮಾರುಕಟ್ಟೆಗಳಲ್ಲಿ ಆತಂಕ ಹೆಚ್ಚಿಸಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಭಾರತ ಸೇರಿದಂತೆ ತೈಲ ಆಮದು ರಾಷ್ಟ್ರಗಳ ಆರ್ಥಿಕತೆಗೆ ಒತ್ತಡ ತರಲಿದೆ ಎಂಬ ಭೀತಿ ಹೂಡಿಕೆದಾರರಲ್ಲಿ ಮನೆ ಮಾಡಿದೆ.

ಇದರ ಪರಿಣಾಮವಾಗಿ ಭಾರತೀಯ ರೂಪಾಯಿಯ ಮೌಲ್ಯವೂ ತೀವ್ರ ಕುಸಿತ ಕಂಡಿದೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 35 ಪೈಸೆ ಕುಸಿದು ಅಮೆರಿಕನ್ ಡಾಲರ್ ಎದುರು 95.63 ಎಂಬ ಸಾರ್ವಕಾಲಿಕ ಕನಿಷ್ಠ ಮಟ್ಟ ದಾಖಲಿಸಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ಗೆ ಬೇಡಿಕೆ ಹೆಚ್ಚುತ್ತಿರುವುದು ರೂಪಾಯಿಯ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.

ಇದಕ್ಕೂ ಮುನ್ನ ಸೋಮವಾರವೂ ಷೇರುಪೇಟೆ ಭಾರೀ ನಷ್ಟದೊಂದಿಗೆ ಮುಕ್ತಾಯಗೊಂಡಿತ್ತು. ಸೆನ್ಸೆಕ್ಸ್ 1,313 ಅಂಕಗಳ ಕುಸಿತದೊಂದಿಗೆ 76,015 ಅಂಕಗಳಿಗೆ ಇಳಿದಿದ್ದರೆ, ನಿಫ್ಟಿ 360 ಅಂಕಗಳ ನಷ್ಟದೊಂದಿಗೆ 23,815 ಅಂಕಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತ್ತು.

ಜಾಗತಿಕ ಆರ್ಥಿಕ ಅನಿಶ್ಚಿತತೆ, ತೈಲದರ ಏರಿಕೆ ಹಾಗೂ ವಿದೇಶಿ ಹೂಡಿಕೆದಾರರ ನಡೆ ಮುಂದಿನ ದಿನಗಳಲ್ಲಿಯೂ ಭಾರತೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande