
ನವದೆಹಲಿ, 01 ಮೇ (ಹಿ.ಸ.) :
ಆ್ಯಂಕರ್ : ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಶಿಮ್ಲಾದಲ್ಲಿರುವ ಸೇನಾ ತರಬೇತಿ ಕಮಾಂಡ್ ಪ್ರಧಾನ ಕಚೇರಿಗೆ ಭೇಟಿ ನೀಡಿ, ಸೇನಾ ಸಿಬ್ಬಂದಿಗೆ ನೀಡಲಾಗುತ್ತಿರುವ ತರಬೇತಿಯ ಗುಣಮಟ್ಟದ ಕುರಿತು ವಿವರಗಳನ್ನು ಪಡೆದರು.
ಈ ವೇಳೆ, ತರಬೇತಿ ಕಮಾಂಡ್ನ ಜಿಒಸಿ-ಇನ್-ಸಿ ಲೆಫ್ಟಿನೆಂಟ್ ಜನರಲ್ ದೇವೆಂದರ್ ಶರ್ಮಾ ಅವರು ಸೌಲಭ್ಯಗಳ ಅಭಿವೃದ್ಧಿ, ಕಾರ್ಯಾಚರಣಾ ದಕ್ಷತೆ ಹೆಚ್ಚಿಸುವ ಕ್ರಮಗಳು ಹಾಗೂ ಭಾರತೀಯ ಸೇನಾ ಸಿಬ್ಬಂದಿಗೆ ನೀಡಲಾಗುತ್ತಿರುವ ಸಮಗ್ರ ತರಬೇತಿ ವಿಧಾನಗಳ ಬಗ್ಗೆ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದರು. ಡ್ರೋನ್ ತರಬೇತಿ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ‘ರೆಡ್ ಟೀಮ್’ ಪರಿಕಲ್ಪನೆ, ಡಿಜಿಟಲೀಕರಣ ಮತ್ತು ಯಾಂತ್ರೀಕರಣದ ಉಪಕ್ರಮಗಳು ಸೇರಿದಂತೆ ಹಲವು ಹೊಸ ಪ್ರಯತ್ನಗಳನ್ನು ಅವರು ವಿವರಿಸಿದರು.
ತರಬೇತಿ ಕಮಾಂಡ್ ಯುದ್ಧ ತಂತ್ರ ರೂಪಿಸುವುದು, ಸಂಪನ್ಮೂಲ ಅಭಿವೃದ್ಧಿ ಹಾಗೂ ಸ್ನೇಹಪರ ವಿದೇಶಗಳೊಂದಿಗೆ ಸಹಕಾರವನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು. ಇದು ಸೈನಿಕ ಸಾಮರ್ಥ್ಯ ವೃದ್ಧಿ, ಸ್ವಾವಲಂಬನೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದಾರಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ಈ ಕಮಾಂಡ್ ತನ್ನ 32 ಅತ್ಯಾಧುನಿಕ ತರಬೇತಿ ಕೇಂದ್ರಗಳ ಮೂಲಕ ಭಾರತೀಯ ಸೇನೆಯಲ್ಲಿ ವೃತ್ತಿಪರತೆಯನ್ನು ಬಲಪಡಿಸುತ್ತಿದ್ದು, ಯುದ್ಧ ಕಲೆ ಮತ್ತು ವಿಜ್ಞಾನಕ್ಕೆ ವಿಶಿಷ್ಟ ದೃಷ್ಟಿಕೋನ ಒದಗಿಸುತ್ತದೆ ಎಂದು ರಾಷ್ಟ್ರಪತಿಗಳು ಶ್ಲಾಘಿಸಿದರು.
ಹಿಮಾಚಲ ಪ್ರದೇಶದ ರಾಜ್ಯಪಾಲ ಕವಿಂದರ್ ಗುಪ್ತಾ ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ರಾಷ್ಟ್ರಪತಿಗಳು ಲೆಫ್ಟಿನೆಂಟ್ ಜನರಲ್ ದೇವೆಂದರ್ ಶರ್ಮಾ ಅವರೊಂದಿಗೆ ಸೇನಾ ತರಬೇತಿ ಮತ್ತು ದೇಶದ ಭದ್ರತೆ ಕುರಿತಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಭಾರತೀಯ ಸೇನೆಯ ಕಾರ್ಯಾಚರಣಾ ಸಿದ್ಧತೆಯನ್ನು ಇನ್ನಷ್ಟು ಬಲಪಡಿಸಲು ಶ್ರದ್ಧೆಯಿಂದ ಕೆಲಸ ಮುಂದುವರಿಸುವಂತೆ ಅವರು ಕಮಾಂಡ್ ಅಧಿಕಾರಿಗಳಿಗೆ ಕರೆ ನೀಡಿದರು.
ಇದೇ ವೇಳೆ, ಕಮಾಂಡ್ನ ಎಲ್ಲಾ ಶ್ರೇಣಿಯ ಸಿಬ್ಬಂದಿ ಹಾಗೂ ರಕ್ಷಣಾ ನಾಗರಿಕರನ್ನು ಅವರ ಸೇವೆಗಾಗಿ ಅಭಿನಂದಿಸಿದ ರಾಷ್ಟ್ರಪತಿಗಳು, ಇನ್ನಷ್ಟು ಉತ್ಸಾಹ ಮತ್ತು ನಿಷ್ಠೆಯಿಂದ ದೇಶ ಸೇವೆ ಮುಂದುವರಿಸಲು ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa