
ಬಾಗಲಕೋಟೆ, 01 ಮೇ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಆಗಸ್ಟ್ನಲ್ಲಿ ನಡೆಯಲಿರುವ ಸುಪ್ರೀಂ ಕೋರ್ಟ್ ವಿಶೇಷ ಲೋಕ ಅದಾಲತ್ ಸಾರ್ವಜನಿಕರಿಗೆ ಹೆಚ್ಚು ಅನುಕೂಲಕರವಾಗಿದ್ದು, ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಮಾನ್ಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗುರುರಾಜ ಜಿ. ಶಿರೋಳ ಅವರು ತಿಳಿಸಿದರು.
ನಗರದ ನ್ಯಾಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ತ್ವರಿತ ಹಾಗೂ ಸುಲಭ ನ್ಯಾಯ ಒದಗಿಸುವುದು ನ್ಯಾಯಾಂಗದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳಿಗೆ ತ್ವರಿತ ಪರಿಹಾರ ದೊರಕುವ ದೃಷ್ಟಿಯಿಂದ ಲೋಕ ಅದಾಲತ್ ಮಹತ್ವದ ವೇದಿಕೆಯಾಗಿದೆ ಎಂದು ವಿವರಿಸಿದರು.
ಬಾಗಲಕೋಟೆ ಜಿಲ್ಲೆ ಹಾಗೂ ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸಂಬಂಧಿತ ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಲೋಕ ಅದಾಲತ್ ಮೂಲಕ ಪರಸ್ಪರ ಸಮಾಧಾನದಿಂದ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವ ಮೂಲಕ ಸಮಯ, ಹಣ ಮತ್ತು ಶ್ರಮವನ್ನು ಉಳಿಸಿಕೊಳ್ಳಬಹುದು. ಈ ಪ್ರಕ್ರಿಯೆ ಸರಳವಾಗಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಹೀಗಾಗಿ ಸಾರ್ವಜನಿಕರು ನ್ಯಾಯಾಂಗ ನೀಡಿರುವ ಈ ವಿಶೇಷ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande