
ಬಾಗಲಕೋಟೆ, 01 ಮೇ (ಹಿ.ಸ.) :
ಆ್ಯಂಕರ್ : ಸರ್ಕಾರಿ ಕಚೇರಿ ಕಾರ್ಯ ವಿಧಾನದ ವಿರುದ್ಧವಾಗಿ ರಸ್ತೆಯಲ್ಲೇ ಕಡತಗಳಿಗೆ ಸಹಿ ಮಾಡಿದ ಘಟನೆ ಬಾಗಲಕೋಟೆಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿ ಇದ್ದಲಗಿ ಅವರ ನಡೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ನಗರದ ನವನಗರ ಪ್ರದೇಶದಲ್ಲಿ ತಮ್ಮ ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿಕೊಂಡು ಕಚೇರಿ ಸಿಬ್ಬಂದಿಯಿಂದ ಕಡತಗಳನ್ನು ತಂದುಕೊಂಡು ಸಹಿ ಮಾಡಿದ ಘಟನೆ ಗಮನ ಸೆಳೆದಿದೆ. ಕಚೇರಿಯಲ್ಲೇ ನಡೆಯಬೇಕಾದ ಅಧಿಕೃತ ಕಾರ್ಯವನ್ನು ಸಾರ್ವಜನಿಕ ಸ್ಥಳದಲ್ಲೇ ನಡೆಸಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆಯ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಅಧಿಕಾರಿ ಉಡಾಫೆಯ ಉತ್ತರ ನೀಡಿದರೆಂದು ತಿಳಿದು ಬದಿದ್ದು, ನಂತರ ಸ್ಥಳದಿಂದ ತಕ್ಷಣ ತೆರಳಿರುವುದಾಗಿ ಸಾಕ್ಷಿದಾರರು ತಿಳಿಸಿದ್ದಾರೆ. ಅಧಿಕಾರಿಯ ಈ ರೀತಿಯ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
“ಸರ್ಕಾರದ ನಿಯಮಗಳು ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲವೇ?”, “ಕಚೇರಿಗಳು ಇದ್ದು ಕೂಡ ರಸ್ತೆ ಮೇಲೆಯೇ ಕಾರ್ಯಾಚರಣೆ ನಡೆಸುವುದು ಏಕೆ?”, “ಯಾವ ಕಡತಗಳಿಗೆ ಸಹಿ ಮಾಡಲಾಗುತ್ತಿದೆ?” ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.
ಅಲ್ಲದೆ, ಇಂತಹ ಕ್ರಮಗಳಿಂದ ಪಾರದರ್ಶಕತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.
ಈ ಘಟನೆ ಕುರಿತು ಹಿರಿಯ ಅಧಿಕಾರಿಗಳು ತಕ್ಷಣವೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸರ್ಕಾರಿ ಅಧಿಕಾರಿಗಳಿಂದ ಜವಾಬ್ದಾರಿಯುತ ನಡೆ ನಿರೀಕ್ಷಿಸಲಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande