ದೇಶದಲ್ಲಿ ಎಲ್ಪಿಜಿ ಪೂರೈಕೆ ಸ್ಥಿರ ; ಒಂದು ದಿನದಲ್ಲಿ 51 ಲಕ್ಷಕ್ಕೂ ಹೆಚ್ಚು ಸಿಲಿಂಡರ್ ವಿತರಣೆ
ನವದೆಹಲಿ, 09 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ಎಲ್ಪಿಜಿ ಪೂರೈಕೆ ಸ್ಥಗಿತಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಬುಧವಾರ ಒಂದೇ ದಿನದಲ್ಲಿ 51 ಲಕ್ಷಕ್ಕೂ ಹೆಚ್ಚು ಗೃಹಬಳಕೆ ಸಿಲಿಂಡರ್ಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು
ಸುಜಾತಾ ಶರ್ಮಾ


ನವದೆಹಲಿ, 09 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ಎಲ್ಪಿಜಿ ಪೂರೈಕೆ ಸ್ಥಗಿತಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಬುಧವಾರ ಒಂದೇ ದಿನದಲ್ಲಿ 51 ಲಕ್ಷಕ್ಕೂ ಹೆಚ್ಚು ಗೃಹಬಳಕೆ ಸಿಲಿಂಡರ್ಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಗುರುವಾರ ನಡೆದ ಅಂತರ-ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾಗತಿಕ ಭೌಗೋಳಿಕ ರಾಜಕೀಯ ಸವಾಲುಗಳ ನಡುವೆಯೂ ದೇಶೀಯ ಗ್ರಾಹಕರಿಗೆ ಶೇ.100 ಪೂರೈಕೆಯನ್ನು ಖಾತ್ರಿಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು. ದೇಶದ ಎಲ್ಪಿಜಿ ಅಗತ್ಯದ ಸುಮಾರು 60 ಶೇಕಡಾ ಆಮದು ಮೇಲೆ ಅವಲಂಬಿತವಾಗಿರುವುದರಿಂದ ಕೆಲವು ತಾತ್ಕಾಲಿಕ ಸವಾಲುಗಳು ಎದುರಾಗಿದ್ದರೂ, ಗೃಹ ಬಳಕೆದಾರರಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಆನ್ಲೈನ್ ಬುಕ್ಕಿಂಗ್ ಶೇ.98ಕ್ಕೆ ತಲುಪಿದ್ದು, ಒಟಿಪಿ ಆಧಾರಿತ ವಿತರಣೆ ಶೇ.92ರಷ್ಟಿದೆ. ವಾಣಿಜ್ಯ ಎಲ್ಪಿಜಿ ಪೂರೈಕೆ ಈಗಾಗಲೇ ಸುಮಾರು 70 ಶೇಕಡಾ ಮಟ್ಟಕ್ಕೆ ಮರುಸ್ಥಾಪನೆಯಾಗಿದೆ. ಮಾರ್ಚ್ 14ರಿಂದ ಇದುವರೆಗೆ ಸುಮಾರು ಒಂದು ಲಕ್ಷ ಟನ್ ಎಲ್ಪಿಜಿ ಪೂರೈಸಲಾಗಿದೆ ಎಂದು ಶರ್ಮಾ ವಿವರಿಸಿದರು.

ಸಣ್ಣ ಗಾತ್ರದ 5 ಕೆಜಿ ಸಿಲಿಂಡರ್ಗಳ ಲಭ್ಯತೆಯನ್ನೂ ಹೆಚ್ಚಿಸಲಾಗಿದ್ದು, ಮಾರ್ಚ್ 23ರಿಂದ 10 ಲಕ್ಷಕ್ಕೂ ಹೆಚ್ಚು ಸಿಲಿಂಡರ್ಗಳನ್ನು ಮಾರಾಟ ಮಾಡಲಾಗಿದೆ. ಜಾಗೃತಿ ಅಭಿಯಾನಗಳ ಮೂಲಕ 2,000ಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿ 20,000 ಸಿಲಿಂಡರ್ಗಳನ್ನು ವಿತರಿಸಲಾಗಿದೆ.

ಇನ್ನೊಂದೆಡೆ, ರಸಗೊಬ್ಬರ ಘಟಕಗಳಿಗೆ ನೈಸರ್ಗಿಕ ಅನಿಲ ಪೂರೈಕೆಯನ್ನು ಶೇ.95ಕ್ಕೆ ಹೆಚ್ಚಿಸಲಾಗಿದ್ದು, ಸಿಟಿ ಗ್ಯಾಸ್ ವಿತರಣಾ ಕಂಪನಿಗಳು ಪ್ರಮುಖ ವಲಯಗಳಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತಿವೆ. ಸುಮಾರು 3.97 ಲಕ್ಷ ಪಿಎನ್ಜಿ ಸಂಪರ್ಕಗಳನ್ನು ಪ್ರಾರಂಭಿಸಲಾಗಿದ್ದು, 4.3 ಲಕ್ಷ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.

ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಖೇಶ್ ಮಂಗಲ್ ಮಾಹಿತಿ ನೀಡುವಂತೆ, ದೇಶದ ಬಂದರು ಕಾರ್ಯಾಚರಣೆಗಳು ಸಾಮಾನ್ಯವಾಗಿದ್ದು, ಯಾವುದೇ ದಟ್ಟಣೆ ಇಲ್ಲ. ಕಳೆದ 24 ಗಂಟೆಗಳಲ್ಲಿ ಭಾರತೀಯ ಹಡಗುಗಳು ಅಥವಾ ನಾವಿಕರಿಗೆ ಸಂಬಂಧಿಸಿದ ಯಾವುದೇ ಅನಾಹುತ ವರದಿಯಾಗಿಲ್ಲ. ಎಲ್ಪಿಜಿ ಸಾಗಣೆ ಹಡಗು ‘ಗ್ರೀನ್ ಆಶಾ’ ಸುರಕ್ಷಿತವಾಗಿ ಜವಾಹರಲಾಲ್ ನೆಹರು ಬಂದರು ತಲುಪಿದೆ ಎಂದು ಅವರು ಹೇಳಿದರು.

ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿ ಮೂಲಕ ಸಾವಿರಾರು ಕರೆಗಳು ಹಾಗೂ ಇಮೇಲ್ಗಳನ್ನು ನಿಭಾಯಿಸಲಾಗಿದ್ದು, 1,800ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ಸಮುದ್ರ ಕಾರ್ಯಾಚರಣೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಸಚಿವಾಲಯ ಸಮನ್ವಯ ಸಾಧಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande