ಬಾಗಲಕೋಟೆ ಕದನ ಕಾವು : ಬಿಜೆಪಿಯಲ್ಲಿ ಆಂತರಿಕ ಗೊಂದಲ, ಪಂಚಮಸಾಲಿ ಮತಗಳತ್ತ ಕಾಂಗ್ರೆಸ್ ಕಣ್ಣು
ಬಾಗಲಕೋಟೆ, 07 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಕ್ಷೇತ್ರದ ರಾಜಕೀಯ ಕದನ ದಿನೇದಿನೇ ತೀವ್ರವಾಗುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಪ್ರತಿಷ್ಠೆಯ ಪೈಪೋಟಿ ಜೋರಾಗಿದೆ. ಬಿಜೆಪಿಯೊಳಗಿನ ಆಂತರಿಕ ಭಿನ್ನಮತಗಳು ಈಗ ಬಹಿರಂಗವಾಗುತ್ತಿರುವಂತೆ ಕಾಣುತ್ತಿದ್ದು, ಶಾಸಕ ಬಸನಗೌಡ ಪಾಟೀ
ಕಾಂಗ್ರೆಸ್


ಬಾಗಲಕೋಟೆ, 07 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಕ್ಷೇತ್ರದ ರಾಜಕೀಯ ಕದನ ದಿನೇದಿನೇ ತೀವ್ರವಾಗುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಪ್ರತಿಷ್ಠೆಯ ಪೈಪೋಟಿ ಜೋರಾಗಿದೆ.

ಬಿಜೆಪಿಯೊಳಗಿನ ಆಂತರಿಕ ಭಿನ್ನಮತಗಳು ಈಗ ಬಹಿರಂಗವಾಗುತ್ತಿರುವಂತೆ ಕಾಣುತ್ತಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಕೆಲವು ದಿನಗಳಿಂದ ತೀವ್ರ ಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂಬ ಚರ್ಚೆ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸಿದೆ.

ಜಿಲ್ಲೆಗೆ ಯತ್ನಾಳ್ ಆಗಮನದ ಹಿನ್ನೆಲೆಯಲ್ಲಿ ಕೇಸರಿ ಪಾಳಯದಲ್ಲಿ ಆಂತರಿಕ ಅಸಮಾಧಾನವಿದೆ ಎಂಬ ಸಂದೇಶ ನೀಡುತ್ತಿದೆ ಎನ್ನಲಾಗುತ್ತಿದೆ. ಇದನ್ನೇ ರಾಜಕೀಯವಾಗಿ ಪ್ರಯೋಜನಪಡಿಸಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ನಾಯಕರು ಜಿಲ್ಲೆಯಲ್ಲಿ ಸಕ್ರಿಯರಾಗಿದ್ದಾರೆ. ಸಿಎಂ ಪುತ್ರ ಯತೀಂದ್ರ ಸಹ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ನಗರದ ಕಂಠಿ ರೆಸಾರ್ಟ್ನಲ್ಲಿ ಪಂಚಮಸಾಲಿ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ಸಮುದಾಯದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಸಮುದಾಯ ಸಮೀಕರಣದ ರಾಜಕೀಯ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಬಿಜೆಪಿಯೊಳಗಿನ ಭಿನ್ನಮತ ಮತ್ತು ಕಾಂಗ್ರೆಸ್ ಪಕ್ಷದ ಈ ಸಮುದಾಯ ಆಧಾರಿತ ತಂತ್ರಗಳು ಮುಂದಿನ ದಿನಗಳಲ್ಲಿ ಬಾಗಲಕೋಟೆ ಕ್ಷೇತ್ರದ ಚುನಾವಣಾ ಸಮೀಕರಣಗಳ ಮೇಲೆ ಮಹತ್ತರ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande