


ಬಳ್ಳಾರಿ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಾರ್ವಜನಿಕರೊಂದಿಗೆ ಸ್ನೇಹಪರವಾಗಿದ್ದುಕೊಂಡು, ಭ್ರಷ್ಟಾಚಾರ ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಮಹಾನಿರೀಕ್ಷಕರಾದ ಡಾ.ಎಂ.ಎ. ಸಲೀಂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ವಿಮರ್ಶನಾ ಸಭೆ ನಡೆಸಿ ಅವರು ಮಾತನಾಡಿದರು.
ಇಲಾಖೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಕಿರಿಯ ಅಧಿಕಾರಿಗಳಿಗೆ ಹಿರಿಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅವರ ವೃತ್ತಿ ಕೌಶಲ್ಯವನ್ನು ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದರು.
ಆಧುನಿಕ ಕಾಲಘಟ್ಟದಲ್ಲಿ ಅಪರಾಧ ತಡೆಗೆ ತಂತ್ರಜ್ಞಾನದ ಪಾತ್ರ ದೊಡ್ಡದಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಸಿಬ್ಬಂದಿಗಳು ಸೂಕ್ತ ತರಬೇತಿ ಪಡೆಯಬೇಕು. ಪ್ರಕರಣಗಳ ತನಿಖೆಯಲ್ಲಿ ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಪೊಲೀಸ್ ವಸತಿ ಗೃಹಗಳಿಗೆ ಭೇಟಿ :
ಸಭೆಯ ನಂತರ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಮಹಾನಿರೀಕ್ಷಕರಾದ ಡಾ.ಎಂ.ಎ. ಸಲೀಂ ಅವರು ಡಿ.ಎ.ಆರ್ ಪೊಲೀಸ್ ವಸತಿ ಗೃಹಗಳ ಸಂಕೀರ್ಣಕ್ಕೆ ಭೇಟಿ ನೀಡಿ, ಅಲ್ಲಿ ವಾಸಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಟುಂಬದವರ ಕುಂದುಕೊರತೆಗಳನ್ನು ಆಲಿಸಿದರು.
ಇದಾದ ಬಳಿಕ ಬಳ್ಳಾರಿ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಬಳ್ಳಾರಿ ವಲಯ ಪೊಲೀಸ್ ಉಪ ಮಹಾನಿರೀಕ್ಷಕರಾದ ಡಾ.ಹರ್ಷ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ.ಪೆನ್ನೇಕರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ನವೀನ್ ಕುಮಾರ್ ಸೇರಿದಂತೆ ಡಿಎಸ್ಪಿ ಅಧಿಕಾರಿಗಳು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್