
ಶ್ರೀನಗರ, 07 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಮ್ಮು-ಕಾಶ್ಮೀರ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿ ಲಷ್ಕರ್-ಎ-ತೈಬಾ ಭಯೋತ್ಪಾದಕ ಜಾಲವನ್ನು ಭೇದಿಸಿ, ಕಿಂಗ್ಪಿನ್ ಸೇರಿ ಐದು ಮಂದಿಯನ್ನು ಬಂಧಿಸಿದೆ.
ಬಂಧಿತರಲ್ಲಿ ಪ್ರಮುಖ ಆರೋಪಿಯಾಗಿರುವ ಅಬ್ದುಲ್ಲಾ ಅಲಿಯಾಸ್ ಅಬು ಹುರೈರಾ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಇತರ ಬಂಧಿತರಲ್ಲಿ ಪಾಕಿಸ್ತಾನ ಮೂಲದ ಉಸ್ಮಾನ್ ಅಲಿಯಾಸ್ ಬಾಬ್ ಸೇರಿದಂತೆ ಶ್ರೀನಗರ ನಿವಾಸಿಗಳಾದ ಮೊಹಮ್ಮದ್ ನಕೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮಿರ್ (ಮಾಮಾ) ಸೇರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಹಾಗೂ ಹರಿಯಾಣ ಸೇರಿ ಒಟ್ಟು 19 ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಮಹತ್ವದ ದಾಖಲೆಗಳು ಮತ್ತು ಅಪರಾಧ ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯಿಂದ ಭಯೋತ್ಪಾದಕರಿಗೆ ಲಾಜಿಸ್ಟಿಕಲ್ ಮತ್ತು ಆರ್ಥಿಕ ನೆರವು ಒದಗಿಸುತ್ತಿದ್ದ ಆಳವಾದ ಜಾಲವೊಂದು ಕಾರ್ಯನಿರ್ವಹಿಸುತ್ತಿದ್ದುದನ್ನು ಬಹಿರಂಗಪಡಿಸಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಈ ಜಾಲದ ಸಹಾಯದಿಂದ ವಿದೇಶಿ ಭಯೋತ್ಪಾದಕರು ನಕಲಿ ಗುರುತಿನ ಚೀಟಿಗಳು ಮತ್ತು ದಾಖಲೆಗಳನ್ನು ಬಳಸಿ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ದೇಶದ ಹೊರಗೂ ಪ್ರಯಾಣಿಸಿದ್ದರು. ಸುಮಾರು 16 ವರ್ಷಗಳ ಹಿಂದೆ ಭಾರತಕ್ಕೆ ನುಸುಳಿದ ಈ ಗುಂಪು ಕಾಶ್ಮೀರ ಕಣಿವೆಯ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿತ್ತು.
ಇವರು ವರ್ಷಗಳಿಂದ ಸುಮಾರು 40 ವಿದೇಶಿ ಭಯೋತ್ಪಾದಕರನ್ನು ನಿರ್ವಹಿಸಿ ಮುನ್ನಡೆಸಿದ್ದು, ಅವರಲ್ಲಿ ಹಲವರು ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa