
ಕೋಲ್ಕತ್ತಾ, 29 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದಲ್ಲಿ ಭಾರಿ ಪ್ರಮಾಣದ ಮತದಾನ ದಾಖಲಾಗಿದ್ದು, ಸಂಜೆ 5 ಗಂಟೆಯ ವೇಳೆಗೆ ಶೇಕಡಾ 89.99ರಷ್ಟು ಮತದಾನ ನಡೆದಿದೆ. ದಕ್ಷಿಣ ಬಂಗಾಳದ ಏಳು ಜಿಲ್ಲೆಗಳ 142 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿದ್ದು, ಒಟ್ಟು 1,448 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇವಿಎಂಗಳಲ್ಲಿ ಬಂಧಿತವಾಗಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪೂರ್ವ ಬರ್ಧಮಾನ ಜಿಲ್ಲೆಯಲ್ಲಿ ಅತಿ ಹೆಚ್ಚು 92.46% ಮತದಾನ ದಾಖಲಾಗಿದ್ದು, ದಕ್ಷಿಣ ಕೋಲ್ಕತ್ತಾದಲ್ಲಿ ಅತಿ ಕಡಿಮೆ 86.11% ಮತದಾನ ನಡೆದಿದೆ. ಹೂಗ್ಲಿ (90.34%), ನಾಡಿಯಾ (90.27%), ಉತ್ತರ 24 ಪರಗಣ (89.74%), ದಕ್ಷಿಣ 24 ಪರಗಣ (89.57%) ಮತ್ತು ಹೌರಾ (89.44%) ಜಿಲ್ಲೆಗಳಲ್ಲೂ ಹೆಚ್ಚಿನ ಪ್ರಮಾಣದ ಮತದಾನ ಕಂಡು ಬಂದಿದೆ.
ಈ ಹಂತದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಭವಾನಿಪುರ ಕ್ಷೇತ್ರದಲ್ಲಿ ಮುಖಾಮುಖಿಯಾಗಿರುವುದು ಚುನಾವಣೆಯ ಪ್ರಮುಖ ಆಕರ್ಷಣೆಯಾಗಿದೆ. ಸಚಿವರು ಹಾಗೂ ವಿವಿಧ ಪಕ್ಷಗಳ ಪ್ರಮುಖ ನಾಯಕರು ಕಣದಲ್ಲಿದ್ದು ರಾಜಕೀಯ ಪೈಪೋಟಿ ತೀವ್ರಗೊಂಡಿದೆ.
ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಭದ್ರತೆ ಕಟ್ಟು ನಿಟ್ಟಾಗಿದ್ದು, ಒಟ್ಟು 2,231 ಕೇಂದ್ರ ಪಡೆಗಳ ಕಂಪನಿಗಳು ಹಾಗೂ ಸುಮಾರು 40 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಹಿಂಸಾಚಾರ ಮತ್ತು ಉದ್ವಿಗ್ನತೆ ವರದಿಯಾಗಿದೆ. ನಾಡಿಯಾ ಜಿಲ್ಲೆಯಲ್ಲೊಬ್ಬ ಬಿಜೆಪಿ ಏಜೆಂಟ್ ಮೇಲೆ ಹಲ್ಲೆ ನಡೆಸಿರುವುದು ತಿಳಿದುಬಂದಿದೆ. ಭವಾನಿಪುರದಲ್ಲಿ ಸುವೇಂದು ಅಧಿಕಾರಿ ಭೇಟಿ ವೇಳೆ ಘರ್ಷಣೆ ಉಂಟಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಯಿತು. ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್ ಪ್ರದೇಶದಲ್ಲೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದೇ ವೇಳೆ, ಹಲವೆಡೆ ಇವಿಎಂ ತಾಂತ್ರಿಕ ದೋಷಗಳಿಂದ ಮತದಾನ ಆರಂಭ ವಿಳಂಬಗೊಂಡಿದ್ದು, ಹೌರಾ, ಬಾರಾಸತ್, ಹಾಬ್ರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಮಸ್ಯೆಗಳು ಕಂಡುಬಂದಿವೆ. ಫಾಲ್ಟಾ ಪ್ರದೇಶದಲ್ಲಿ ಇವಿಎಂ ಕುರಿತು ಉದ್ಭವಿಸಿದ ಆರೋಪಗಳು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿವೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ಮೇಲೆ ಪಕ್ಷಪಾತದ ಆರೋಪ ಮಾಡಿದ್ದು, ಹೊರಗಿನ ವೀಕ್ಷಕರ ಹಸ್ತಕ್ಷೇಪವನ್ನು ಪ್ರಶ್ನಿಸಿದ್ದಾರೆ. ಇತ್ತ ಸುವೇಂದು ಅಧಿಕಾರಿ ಅವರು ಮುಖ್ಯಮಂತ್ರಿ ವಿರುದ್ಧ ಟೀಕೆ ನಡೆಸಿ, ತಮ್ಮ ಜಯದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗಮನಾರ್ಹವಾಗಿ, ಮೊದಲ ಹಂತದಲ್ಲಿ ಶೇಕಡಾ 93ರಷ್ಟು ಮತದಾನ ದಾಖಲಾಗಿದ್ದರೆ, ಅಂತಿಮ ಹಂತದಲ್ಲೂ ಅದೇ ಮಟ್ಟದ ಉತ್ಸಾಹ ಮುಂದುವರಿದಿದೆ. ಒಟ್ಟಿನಲ್ಲಿ, ಭಾರೀ ಮತದಾನದಿಂದ ಫಲಿತಾಂಶದ ಕುರಿತ ಕುತೂಹಲ ಗರಿ ಗೆದರಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa