ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನರ ದಾರುಣ ಸಾವು
ಬೆಂಗಳೂರು, 29 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬೆಂಗಳೂರು ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಯ ನಡುವೆ ಮನಕಲಕುವ ದುರಂತವೊಂದು ಸಂಭವಿಸಿದೆ. ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಹಳೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು
ಗಾಯಾಳು ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ


ಬೆಂಗಳೂರು, 29 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಯ ನಡುವೆ ಮನಕಲಕುವ ದುರಂತವೊಂದು ಸಂಭವಿಸಿದೆ. ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಹಳೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ,

ಸಂಜೆ 6 ಗಂಟೆಯ ಸುಮಾರಿಗೆ ನಗರದಲ್ಲಿ ಮಳೆ ಜೋರಾಗಿ ಸುರಿಯತೊಡಗಿತು. ಈ ವೇಳೆ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದವರು ಹಾಗೂ ಗ್ರಾಹಕರು ಮಳೆಯಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಯ ಗೋಡೆಗೆ ಆಧಾರವಾಗಿ ಹಾಕಿದ್ದ ದೊಡ್ಡ ಟಾರ್ಪಲ್ ಅಡಿಯಲ್ಲಿ ನಿಂತಿದ್ದರು. ಕೆಲವೇ ಕ್ಷಣಗಳಲ್ಲಿ ಮಳೆಯ ಒತ್ತಡಕ್ಕೆ ಶಿಥಿಲಗೊಂಡಿದ್ದ ಹಳೆಯ ಕಂಪೌಡ ಗೋಡೆ ಕುಸಿದು ಬಿದ್ದು, ಅದರ ಅವಶೇಷಗಳಡಿ ಸಿಲುಕಿದ ಎಲ್ಲರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಈ ದುರಂತದಲ್ಲಿ ಮೃತಪಟ್ಟ ಏಳು ಮಂದಿಯ ಗುರುತು ಪತ್ತೆಯಾಗಿದ್ದು, ಅವರ ವಿವರಗಳು ಹೀಗಿವೆ:

ತಬೀನ್ ತಾಜ್ (4 ವರ್ಷ), ಮುಬೀನ್ ತಾಜ್ (4 ವರ್ಷ), ಮಾಯಾ (51 ವರ್ಷ), ಸಾಜಿದ್ (20 ವರ್ಷ), ಅಜಗರ್ (35 ವರ್ಷ), ಪ್ರೀತಿ (51 ವರ್ಷ), ಸಿಜಿ (47 ವರ್ಷ).

ಸಂಬಂಧಿತ ಗೋಡೆಯ ಪಕ್ಕದಲ್ಲಿ ವ್ಯಾಪಾರಸ್ಥರು ದೊಡ್ಡ ಟಾರ್ಪಲ್ ಹಾಕಿಕೊಂಡು ದಿನನಿತ್ಯ ಜೀವನ ಸಾಗಿಸುತ್ತಿದ್ದರು. ಮಳೆ ಬಂದಾಗ ಫುಟ್ಪಾತ್ ಮೇಲಿದ್ದವರು ಮತ್ತು ದಾರಿಹೋಕರು ಸಹ ಅದೇ ಟಾರ್ಪಲ್ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಆದರೆ ಗೋಡೆಯ ದುರ್ಬಲ ಸ್ಥಿತಿ ಹಾಗೂ ನಿರಂತರ ಮಳೆಯ ಒತ್ತಡ ದುರಂತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಇದೇ ವೇಳೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ

“ಹಳೆಯ ಗೋಡೆಯ ಸ್ಥಿತಿ ಪರಿಶೀಲನೆ ಮಾಡಲಿಲ್ಲವೇ? ಇಲಾಖೆಗಳ ನಡುವೆ ಸಮನ್ವಯವೇ ಇಲ್ಲವೇ? ಎಚ್ಚರಿಕೆ ಕೈಗೊಂಡಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು,” ಎಂದು ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ತಲಾ ₹5 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಪೌಂಡ್ ಕುಸಿತದ ಬಗ್ಗೆ ತಕ್ಷಣವೇ ಸಮಗ್ರ ತನಿಖೆಗೆ ಆದೇಶ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande