ಉಡುಪಿ ಐಐಜಿಜೆ ನೂತನ ಆವರಣ ಉದ್ಘಾಟಿಸಿದ ಸಚಿವೆ ನಿರ್ಮಲಾ ಸೀತಾರಾಮನ್
ಉಡುಪಿ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಉಡುಪಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ ಸಂಸ್ಥೆಯ ನೂತನ ಆವರಣವನ್ನು ಉದ್ಘಾಟಿಸಿದರು. 2017ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆಯಾಗಿದ್ದಾಗಲೇ ನಿರ್ಮಲ
Inauguration


ಉಡುಪಿ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಉಡುಪಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ ಸಂಸ್ಥೆಯ ನೂತನ ಆವರಣವನ್ನು ಉದ್ಘಾಟಿಸಿದರು.

2017ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆಯಾಗಿದ್ದಾಗಲೇ ನಿರ್ಮಲಾ ಸೀತಾರಾಮನ್ ಅವರು ಯುವಜನರು ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ವಿಸ್ತರಿಸುವ ಉದ್ದೇಶದಿಂದ ಈ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ , ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿ ಹಾಗೂ ಅಹಮದಾಬಾದ್ನ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಸಹಕಾರದಿಂದ ಈ ಯೋಜನೆ ಸಾಕಾರಗೊಂಡಿದೆ. ದಕ್ಷಿಣ ಭಾರತದಲ್ಲಿಯೇ ಇಂತಹ ಮೊದಲ ತರಬೇತಿ ಮತ್ತು ತಾಂತ್ರಿಕ ಕೇಂದ್ರವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಉಡುಪಿ ಪ್ರದೇಶವು ಆಭರಣ ತಯಾರಿಕೆಯಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, 100ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳು ಹಾಗೂ 5,000ಕ್ಕೂ ಹೆಚ್ಚು ಕುಶಲಕರ್ಮಿಗಳು ಇಲ್ಲಿದ್ದಾರೆ. ಆದರೆ ಆಧುನಿಕ ತಾಂತ್ರಿಕ ಜ್ಞಾನದ ಕೊರತೆ ಇದ್ದ ಹಿನ್ನೆಲೆಯಲ್ಲಿ, ಈ ಸಂಸ್ಥೆ ಆ ಕೊರತೆಯನ್ನು ನೀಗಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಐಐಜಿಜೆ ಸಂಸ್ಥೆಯು ಯುವಜನರಿಗೆ ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಕೌಶಲ್ಯಾಭಿವೃದ್ಧಿಗೂ ಉತ್ತೇಜನ ನೀಡುತ್ತಿದೆ. ವಿನ್ಯಾಸ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆ ಸಾಧಿಸಲು ತರಬೇತಿಯನ್ನು ಒದಗಿಸಲಾಗುತ್ತಿದೆ.

ಸಂಸ್ಥೆಯಲ್ಲಿ ಎಕ್ಸ್-ಆರ್-ಎಫ್ ಚಿನ್ನದ ಶುದ್ಧತೆ ಪರೀಕ್ಷೆ, ಕ್ಯಾಡ್ ತಂತ್ರಾಂಶ, ಕಾಸ್ಟಿಂಗ್ ಯಂತ್ರಗಳು, ಪ್ಲೇಟಿಂಗ್ ಘಟಕಗಳು ಸೇರಿದಂತೆ ಒಟ್ಟು 41 ಅತ್ಯಾಧುನಿಕ ಯಂತ್ರೋಪಕರಣಗಳ ವ್ಯವಸ್ಥೆ ಇದೆ. ತರಬೇತಿ ಜೊತೆಗೆ ಸಾಮಾನ್ಯ ಸೌಲಭ್ಯ ಕೇಂದ್ರ ಸೇವೆಗಳನ್ನೂ ಒದಗಿಸಲಾಗುತ್ತಿದೆ.

ಇದುವರೆಗೆ ಐಐಜಿಜೆ-ಉಡುಪಿಯು 762 ಆಭರಣ ಕುಶಲಕರ್ಮಿಗಳಿಗೆ ಪರಿಚಯ ಪತ್ರ ನೋಂದಣಿ ಮಾಡಿಸುವ ಮೂಲಕ ಅವರನ್ನು ಔಪಚಾರಿಕ ವಲಯಕ್ಕೆ ತರಲು ನೆರವಾಗಿದೆ. ಜೊತೆಗೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ತರಬೇತಿಗಳನ್ನು ನೀಡಲಾಗುತ್ತಿದೆ.

ಈ ಹೊಸ ಆವರಣವು ಉಡುಪಿಯ ಆಭರಣ ವಲಯಕ್ಕೆ ತಾಂತ್ರಿಕ ಶಕ್ತಿ ತುಂಬುವ ಜೊತೆಗೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆಗೆ ಹೊಸ ದಾರಿಗಳನ್ನು ತೆರೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande