ವಾಷಿಂಗ್ಟನ್ನಲ್ಲಿ ಗುಂಡಿನ ದಾಳಿ ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುರಕ್ಷಿತ
ಉಂಟಾಯಿತು
Firing


ವಾಷಿಂಗ್ಟನ್, 26 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಶನಿವಾರ ಸಂಜೆ ನಡೆದ ಶ್ವೇತಭವನದ ವರದಿಗಾರರ ಭೋಜನ ಕೂಟ ಕಾರ್ಯಕ್ರಮದ ವೇಳೆ ಹೊರಭಾಗದಲ್ಲಿ ಗುಂಡಿನ ದಾಳಿ ಸಂಭವಿಸಿ ಆತಂಕದ ವಾತಾವರಣ ಉಂಟಾಯಿತು. ತಕ್ಷಣವೇ ಭದ್ರತಾ ಸಿಬ್ಬಂದಿ ಕ್ರಮ ಕೈಗೊಂಡು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅವರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೋಜನ ಕಾರ್ಯಕ್ರಮವನ್ನು ವಾಷಿಂಗ್ಟನ್ನ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ನ ಬಾಲ್ ರೂಂನಲ್ಲಿ ಆಯೋಜಿಸಲಾಗಿತ್ತು. ಗುಂಡಿನ ದಾಳಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವಿಸ್ ಒಬ್ಬ ಏಜೆಂಟ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿಗಳ ಪ್ರಕಾರ, ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಅಧ್ಯಕ್ಷರು ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸ್ಥಳಕ್ಕೆ ಆಗಮಿಸಿದ್ದರು. ದಾಳಿ ಸಂಭವಿಸಿದ ತಕ್ಷಣವೇ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಅವರನ್ನು ಸ್ಥಳಾಂತರಿಸಿದರು.

ಟ್ರೂತ್ ಸೋಶಿಯಲ್ನಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, “ಪ್ರಥಮ ಮಹಿಳೆ, ಉಪಾಧ್ಯಕ್ಷರು ಮತ್ತು ಸಂಪುಟದ ಎಲ್ಲಾ ಸದಸ್ಯರು ಸುರಕ್ಷಿತವಾಗಿದ್ದಾರೆ. ಕಾನೂನು ಜಾರಿ ಸಂಸ್ಥೆಗಳು ಅತ್ಯುತ್ತಮ ಕಾರ್ಯ ನಿರ್ವಹಿಸಿವೆ” ಎಂದು ತಿಳಿಸಿದ್ದಾರೆ. ಅಲ್ಲದೆ, 30 ದಿನಗಳೊಳಗೆ ಈ ಭೋಜನ ಕಾರ್ಯಕ್ರಮವನ್ನು ಮರು ಆಯೋಜಿಸಲಾಗುವುದು ಎಂದೂ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಐದುರಿಂದ ಎಂಟು ಸುತ್ತು ಗುಂಡಿನ ಸದ್ದು ಕೇಳಿಸಿದ್ದು, ಬಾಲ್ ರೂಂ ಒಳಗಿದ್ದವರು ತಕ್ಷಣ ನೆಲಕ್ಕೆ ಮಲಗಿ ಸುರಕ್ಷತೆ ಪಡೆದಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದು ಪರಿಶೀಲನೆ ನಡೆಸಿದರು.

ದಾಳಿಕೋರನನ್ನು ಬಂಧಿಸಲಾಗಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ರಾತ್ರಿ ಸುಮಾರು 8:30ರ ಸುಮಾರಿಗೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷೆ ಹಾಗೂ ಸಿಬಿಎಸ್ ಪತ್ರಕರ್ತೆ ವೀಜಿಯಾ ಜಿಯಾಂಗ್, “ಅಧ್ಯಕ್ಷರು ಸುರಕ್ಷಿತವಾಗಿದ್ದಾರೆ. ನಾವು ಎಲ್ಲರೂ ಕ್ಷೇಮವಾಗಿದ್ದೇವೆ. ಮತ್ತೆ ಭೇಟಿಯಾಗೋಣ” ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande