
ಗದಗ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ನಗರದ 16ನೇ ವಾರ್ಡ್ ವ್ಯಾಪ್ತಿಯ ಹೊಂಬಳ ನಾಕಾ ಜನತಾ ಕಾಲೋನಿಯಲ್ಲಿ ದಶಕಗಳಿಂದ ಮುಂದುವರಿದಿರುವ ರಸ್ತೆ ಹಾಗೂ ಒಳಚರಂಡಿ ಸಮಸ್ಯೆಗೆ ಅಂತಿಮ ಪರಿಹಾರ ಸಿಗುವ ನಿರೀಕ್ಷೆ ಮೂಡಿದ್ದರೂ, ಈಗ ಆರಂಭಗೊಂಡಿರುವ ರಸ್ತೆ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ಅನುಭವಿಸುತ್ತಿರುವ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು, ಮೊದಲಿಗೆ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಿ ಬಳಿಕ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣಾ ಎಚ್ ಹಡಪದ ಅವರು, “ಕಳೆದ 40 ವರ್ಷಗಳಿಂದ ನಮ್ಮ ಕಾಲೋನಿಯಲ್ಲಿ ಸರಿಯಾದ ರಸ್ತೆ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲದೆ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್ಗೂ ಪ್ರವೇಶಿಸಲು ಸಾಧ್ಯವಾಗದ ದುಸ್ಥಿತಿ ಇದೆ. ಅನಾರೋಗ್ಯ ಪೀಡಿತರನ್ನು ಹಾಗೂ ಗರ್ಭಿಣಿಯರನ್ನು ಮುಖ್ಯ ರಸ್ತೆಯವರೆಗೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ,” ಎಂದು ವಿವರಿಸಿದ್ದಾರೆ.
ಇದೀಗ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿರುವುದು ಸಂತೋಷದ ವಿಷಯವಾದರೂ, ಕಾಮಗಾರಿ ಸರಿಯಾದ ಯೋಜನೆಯಿಲ್ಲದೆ ನಡೆಯುತ್ತಿರುವುದು ಚಿಂತಾಜನಕವಾಗಿದೆ. ರಸ್ತೆ ಮಧ್ಯದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸದೇ ಕಾಮಗಾರಿ ಕೈಗೊಳ್ಳುವುದರಿಂದ ರಸ್ತೆ ವಿಸ್ತರಣೆಯ ಉದ್ದೇಶವೇ ವಿಫಲವಾಗುವ ಸಾಧ್ಯತೆ ಇದೆ. ಇದರಿಂದ ಅತಿಕ್ರಮಣಕಾರರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
“ದಶಕಗಳ ಹೋರಾಟದ ಫಲವಾಗಿ ಸಿಕ್ಕಿರುವ ಈ ಅವಕಾಶವನ್ನು ಶಾಶ್ವತ ಪರಿಹಾರವಾಗಿಸಲು ಅಧಿಕಾರಿಗಳು ದೂರದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಒಳಚರಂಡಿ ಸಂಪರ್ಕವನ್ನು ನೀಡುವ ಮೊದಲೇ ಸಿಸಿ ರಸ್ತೆ ನಿರ್ಮಿಸಿದರೆ, ಮುಂದಿನ ದಿನಗಳಲ್ಲಿ ಒಳಚರಂಡಿ ಕಾಮಗಾರಿಗಾಗಿ ಹೊಸ ರಸ್ತೆಯನ್ನು ಮತ್ತೆ ಅಗೆಯಬೇಕಾಗುತ್ತದೆ. ಇದು ಸಾರ್ವಜನಿಕರ ತೆರಿಗೆ ಹಣದ ವ್ಯರ್ಥ ವ್ಯಯಕ್ಕೆ ಕಾರಣವಾಗುತ್ತದೆ,” ಎಂದು ಅವರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಿಶೇಷವಾಗಿ ಗಿಡಗಂಟಿಗಳನ್ನು ತೆರವುಗೊಳಿಸಿ ರಸ್ತೆ ಅತಿಕ್ರಮಣವಾಗದಂತೆ ನೋಡಿಕೊಳ್ಳುವುದು, ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಡಜನರ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೊದಲು ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಿ ನಂತರ ಸಿಸಿ ರಸ್ತೆ ನಿರ್ಮಾಣ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಾಲೋನಿಯ ನಿವಾಸಿಗಳು ಒಟ್ಟಾರೆ ಆಗ್ರಹ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP